ಬೆಂಗಳೂರು: ಹಿರಿಯ ನಟ ಅನಂತ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, “ಇದೆಲ್ಲವೂ ಸಾಧ್ಯವಾಗಿದ್ದು ಕರ್ನಾಟಕದ ಜನತೆಯಿಂದಾಗಿ ಅದಕ್ಕಾಗಿ ಈ ಗೌರವವನ್ನೂ ಸಹ ನಾನು ಕರ್ನಾಟಕದ ಜನತೆಗೆ ಅರ್ಪಿಸುತ್ತಿದ್ದೇನೆ” ಎಂದು ಅನಂತ್ ನಾಗ್ ಹೇಳಿದ್ದಾರೆ.
ಪ್ರಶಸ್ತಿ ಲಭಿಸಿರುವ ಕುರಿತು ಪ್ರತಿಕ್ರಿಯಿಸಿರುವ ಅನಂತ್ ನಾಗ್, ಪ್ರಶಸ್ತಿ ಘೋಷಣೆಯಾಗುವವರೆಗೂ ತಮಗೆ ಯಾವುದೇ ಮುನ್ಸೂಚನೆ ಇರಲಿಲ್ಲ. ಪ್ರಶಸ್ತಿ ಬಂದಿರುವ ವಿಷಯ ತಿಳಿದಾಗ ತಾವು ಮನೆಯ ಗೇಟ್‌ಗೆ ಪೇಂಟಿಂಗ್ ಮಾಡುವ ಕೆಲಸದಲ್ಲಿ ಮಗ್ನರಾಗಿದ್ದೆ. ಹೀಗಾಗಿ ಪ್ರಶಸ್ತಿ ಘೋಷಣೆ ಸಂಪೂರ್ಣ ಅನಿರೀಕ್ಷಿತವಾಗಿತ್ತು ಎಂದು ಅವರು ಹೇಳಿದ್ದಾರೆ.
‘ಪ್ರಶಸ್ತಿ ಘೋಷಣೆಯಾಗಲಿದೆ ಎಂಬ ಮುನ್ಸೂಚನೆ ಮೊದಲೇ ಸಿಕ್ಕಿದ್ದರೆ ಸ್ವಲ್ಪ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಕನಿಷ್ಠ ಶೇವ್ ಮಾಡಿಕೊಳ್ಳಬಹುದಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಏಕಾಏಕಿ ಟ್ವೀಟ್ ಮಾಡುವ ಮೂಲಕ ಪ್ರಶಸ್ತಿ ಘೋಷಿಸಿದಾಗ, ತಯಾರಿ ನಡೆಸಲು ನನಗೆ ಯಾವುದೇ ಸಮಯ ಇರಲಿಲ್ಲ’ ಎಂದು ಅನಂತ ನಾಗ್ ಹಾಸ್ಯಮಿಶ್ರಿತವಾಗಿ ಪ್ರತಿಕ್ರಿಯಿಸಿದ್ದಾರೆ.
ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ತಮಗೆ ದೇಶದ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಲ್ಲೊಂದಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವುದು ಸಂತಸದ ವಿಚಾರ ಎಂದು ಅವರು ಹೇಳಿದ್ದಾರೆ.
ತಮ್ಮ ಕಲಾಯಾತ್ರೆಯಲ್ಲಿ ಜೊತೆಯಾದ ನಿರ್ದೇಶಕರು, ನಿರ್ಮಾಪಕರು, ಸಹನಟರು ಹಾಗೂ ರಂಗಭೂಮಿಯ ಗುರುಗಳನ್ನು ಸ್ಮರಿಸಿದ ಅನಂತ ನಾಗ್, ತಮ್ಮ ಈ ಸಾಧನೆಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
‘ಈ ಪ್ರಶಸ್ತಿ ನನಗೆ ವಿಶೇಷವಾದದ್ದು. ಆದರೆ ಇದುವರೆಗೆ ಅನೇಕರಿಗೆ ಈ ಪ್ರಶಸ್ತಿ ದೊರೆತಿದೆ ಎಂಬುದನ್ನು ಮರೆಯಬಾರದು’ ಎಂದು ಹೇಳುವ ಮೂಲಕ ಪ್ರಶಸ್ತಿಯನ್ನು ವಿನಮ್ರತೆಯಿಂದ ಸ್ವೀಕರಿಸಿದ್ದಾರೆ.
ಹಲವು ದಶಕಗಳ ಕಾಲ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಗುರುತಿಸಿಕೊಂಡಿರುವ ಅನಂತ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವುದು ಅವರ ಸುದೀರ್ಘ ಕಲಾಯಾತ್ರೆಗೆ ಸಂದ ಗೌರವವಾಗಿದೆ.






















