SK Home Ad
Home ಸುದ್ದಿ ದೇಶ ವಿಕಸಿತ ಭಾರತಕ್ಕೆ ವ್ಯಸನಮುಕ್ತ ಯುವಶಕ್ತಿಯೇ ಅಡಿಪಾಯ: ಮೋದಿ

ವಿಕಸಿತ ಭಾರತಕ್ಕೆ ವ್ಯಸನಮುಕ್ತ ಯುವಶಕ್ತಿಯೇ ಅಡಿಪಾಯ: ಮೋದಿ

0
6

ನವದೆಹಲಿ: ಮಾದಕ ವ್ಯಸನಮುಕ್ತ ಯುವಶಕ್ತಿಯೇ ವಿಕಸಿತ ಭಾರತದ ಅಡಿಪಾಯ ಎಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ, ಯುವಜನತೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿದ್ದರೆ ಮಾತ್ರ ದೇಶ ಅಭಿವೃದ್ಧಿಯತ್ತ ವೇಗವಾಗಿ ಸಾಗಲು ಸಾಧ್ಯ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ʻನಶೆ ಮುಕ್ತ ಯುವ ವಿಕಸಿತ ಭಾರತ ಸಂಕಲ್ಪ ಅಭಿಯಾನʼಕ್ಕೆ ವರ್ಚುವಲ್‌ ಮೂಲಕ ಚಾಲನೆ ನೀಡಿ ಅವರು ದೇಶದ ಯುವಕರಿಗೆ ವ್ಯಸನಗಳಿಂದ ದೂರವಿರುವಂತೆ ಕರೆ ನೀಡಿದರು.

ಯುವಕರಲ್ಲಿ ಮಾದಕ ವ್ಯಸನ ನಿರ್ಮೂಲನೆ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಆರಂಭಿಸಲಾದ ʻನಶೆ ಮುಕ್ತ ಯುವ ವಿಕಸಿತ ಭಾರತ ಸಂಕಲ್ಪ ಅಭಿಯಾನʼಕ್ಕೆ ಭಾನುವಾರ ವರ್ಚುವಲ್‌ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಈ ಅಭಿಯಾನವು ಕೇವಲ ಯುವಜನತೆಗೆ ಮಾತ್ರ ಸೀಮಿತವಾಗಿರುವ ಕಾರ್ಯಕ್ರಮವಲ್ಲ. ಇದು ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಭವಿಷ್ಯವನ್ನು ಬಲಪಡಿಸುವ ಜನಾಂದೋಲನವಾಗಿದ್ದು, ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ಅಗತ್ಯ ಎಂದು ಪ್ರಧಾನಿ ಹೇಳಿದರು.

ಯುವಕರು ತಮ್ಮ ಜೀವನವನ್ನು ಮಾದಕ ವ್ಯಸನಗಳಿಂದ ಮುಕ್ತವಾಗಿಟ್ಟುಕೊಳ್ಳುವುದರ ಜೊತೆಗೆ ತಮ್ಮ ಸಮುದಾಯದಲ್ಲಿಯೂ ಜಾಗೃತಿ ಮೂಡಿಸಿ ಸಾಮಾಜಿಕ ಬದಲಾವಣೆಯ ರಾಯಭಾರಿಗಳಾಗಬೇಕು ಎಂದು ಅವರು ಕರೆ ನೀಡಿದರು.

ದೇಶದ ವಿವಿಧ ಭಾಗಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕ ಯುವಕರು ತಮ್ಮನ್ನು Gen-Z ಪ್ರತಿನಿಧಿಗಳಾಗಿ ಪರಿಚಯಿಸಿಕೊಂಡರು. ಯುವಜನತೆಯ ಆರೋಗ್ಯಕರ ಬದುಕು ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ ಈ ಅಭಿಯಾನ ರೂಪಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.

100 ವಾರಗಳ ʻಜನ ಭಾಗಿದಾರಿʼ ಅಭಿಯಾನ: ʻನಶೆ ಮುಕ್ತ ಯುವ ವಿಕಸಿತ ಭಾರತ ಸಂಕಲ್ಪ ಅಭಿಯಾನʼದ ಭಾಗವಾಗಿ ದೇಶಾದ್ಯಂತ 100 ವಾರಗಳ ʻಜನ ಭಾಗಿದಾರಿʼ ಅಭಿಯಾನವನ್ನು ಆರಂಭಿಸಲಾಗಿದೆ. ಪ್ರತಿ ಭಾನುವಾರ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸಿದೆ.

ಈ ಅಭಿಯಾನದಡಿ ಕ್ರೀಡಾಕೂಟಗಳು, ವಾಕ್‌ಥಾನ್‌, ಧ್ಯಾನ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗೃತಿ ರ್ಯಾಲಿಗಳು, ಬೀದಿ ನಾಟಕಗಳು, ಚರ್ಚಾ ವೇದಿಕೆಗಳು, ಕಲಾ ಸ್ಪರ್ಧೆಗಳು ಹಾಗೂ ಸಮುದಾಯದ ಸಹಭಾಗಿತ್ವದ ವಿವಿಧ ಕಾರ್ಯಕ್ರಮಗಳನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗುತ್ತದೆ.

2020ರಿಂದಲೇ ನಶೆ ಮುಕ್ತ ಭಾರತ ಅಭಿಯಾನ: ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಪ್ರಧಾನಿ ನರೇಂದ್ರ ಮೋದಿ ಅವರ ʻನಶೆ ಮುಕ್ತ ಭಾರತʼ ಪರಿಕಲ್ಪನೆಗೆ ಅನುಗುಣವಾಗಿ 2020ರಲ್ಲಿ ʻನಶೆ ಮುಕ್ತ ಭಾರತ ಅಭಿಯಾನʼ ಆರಂಭಿಸಲಾಗಿತ್ತು ಎಂದು ತಿಳಿಸಿದರು. ಈಗ ಅದರ ಮುಂದುವರಿದ ಭಾಗವಾಗಿ ಯುವಜನರನ್ನು ಕೇಂದ್ರಬಿಂದುವಾಗಿಟ್ಟುಕೊಂಡು ʻನಶೆ ಮುಕ್ತ ಯುವ ವಿಕಸಿತ ಭಾರತ ಸಂಕಲ್ಪ ಅಭಿಯಾನʼಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಹೊಸ ಅಭಿಯಾನದ ಮೂಲಕ ಯುವಕರನ್ನು ಮಾದಕ ವ್ಯಸನಗಳಿಂದ ದೂರವಿರಿಸಿ, ಆರೋಗ್ಯವಂತ, ಜವಾಬ್ದಾರಿಯುತ ಹಾಗೂ ರಾಷ್ಟ್ರಾಭಿವೃದ್ಧಿಗೆ ಕೊಡುಗೆ ನೀಡುವ ನಾಗರಿಕರನ್ನಾಗಿ ರೂಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.