SK Home Ad
Home ಸಿನಿ ಮಿಲ್ಸ್ ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ನಲ್ಲಿ ರಶ್ಮಿಕಾ: ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಪ್ಯಾನ್ ಇಂಡಿಯಾ ಚಿತ್ರಕ್ಕೆ ಚಾಲನೆ!

ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ನಲ್ಲಿ ರಶ್ಮಿಕಾ: ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಪ್ಯಾನ್ ಇಂಡಿಯಾ ಚಿತ್ರಕ್ಕೆ ಚಾಲನೆ!

0
19

ಬೆಂಗಳೂರು: ಭಾರತದ ಶ್ರೇಷ್ಠ ಶಾಸ್ತ್ರೀಯ ಗಾಯಕಿ, ‘ಭಾರತ ರತ್ನ’ ಪುರಸ್ಕೃತೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಪ್ಯಾನ್ ಇಂಡಿಯಾ ಸಿನಿಮಾಗೆ ಅಧಿಕೃತ ಚಾಲನೆ ಸಿಕ್ಕಿದೆ. ದಶಕಗಳ ಕಾಲ ತಮ್ಮ ದೈವಿಕ ಕಂಠದಿಂದ ಜಗತ್ತನ್ನೇ ಮಂತ್ರಮುಗ್ಧಗೊಳಿಸಿದ ಸಂಗೀತ ದೇವತೆಯ ಕಥೆಯನ್ನು ಬೆಳ್ಳಿಪರದೆಯ ಮೇಲೆ ತರಲು ಕನ್ನಡದ ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮುಂದಾಗಿದ್ದಾರೆ. ತೆಲುಗಿನ ಪ್ರತಿಷ್ಠಿತ ನಿರ್ಮಾಪಕರಾದ ಅಲ್ಲು ಅರವಿಂದ್ ಹಾಗೂ ಬನ್ನಿ ವಾಸ್ ಅವರೊಂದಿಗೆ ಜೊತೆಗೂಡಿ ಈ ಬೃಹತ್ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಲಾಗುತ್ತಿದೆ.

ಚೆನ್ನೈನ ಪ್ರತಿಷ್ಠಿತ ಮ್ಯೂಸಿಕ್ ಅಕಾಡೆಮಿಯಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿತು. ನಟ ಕಮಲ್ ಹಾಸನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ನಟಿ ರಶ್ಮಿಕಾ ಮಂದಣ್ಣ ಈ ಬಯೋಪಿಕ್‌ನಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಗೌತಮ್ ತಿನ್ನನೂರಿ ನಿರ್ದೇಶನ ಹಾಗೂ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, “ಸುಮಾರು ಎಂಟು ವರ್ಷಗಳ ಕಾಲ ಸುದೀರ್ಘ ಸಂಶೋಧನೆ ನಡೆಸಿ, ಕುಟುಂಬಸ್ಥರಿಂದ ಅಧಿಕೃತ ಹಕ್ಕುಗಳನ್ನು ಪಡೆದುಕೊಂಡು ಈ ಸಿನಿಮಾ ನಿರ್ಮಿಸಲಾಗುತ್ತಿದೆ. ಮಹೋನ್ನತ ವ್ಯಕ್ತಿತ್ವದ ಈ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಪರಿಪೂರ್ಣ ಆಯ್ಕೆಯಾಗಿದ್ದಾರೆ” ಎಂದು ತಿಳಿಸಿದರು.

ಇನ್ನು ಈ ಮಹತ್ವದ ಪಾತ್ರದ ಬಗ್ಗೆ ಸಂತಸ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ, “ಸಂಗೀತ ದೇವತೆಯ ಪಾತ್ರ ಪೋಷಿಸುವ ದೊಡ್ಡ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಲು ಶ್ರಮಿಸುತ್ತೇನೆ” ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಮಲ್ ಹಾಸನ್, ಭಾರತೀಯ ಸಂಗೀತ ಕ್ಷೇತ್ರಕ್ಕೆ ಸುಬ್ಬುಲಕ್ಷ್ಮಿ ಅವರ ಕೊಡುಗೆಯನ್ನು ಸ್ಮರಿಸಿ, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು.