SK Home Ad
Home ಸುದ್ದಿ ದೇಶ BRICSನಲ್ಲಿ ಸುಧಾರಣೆಯ ಪ್ರತಿಪಾದನೆ – ‘ಜಾಗತಿಕ ಆಡಳಿತದ ಪಿರಮಿಡ್ ಬದಲಾಗಬೇಕು : ಪ್ರಧಾನಿ ಮೋದಿ

BRICSನಲ್ಲಿ ಸುಧಾರಣೆಯ ಪ್ರತಿಪಾದನೆ – ‘ಜಾಗತಿಕ ಆಡಳಿತದ ಪಿರಮಿಡ್ ಬದಲಾಗಬೇಕು : ಪ್ರಧಾನಿ ಮೋದಿ

0
37
‘ನಿರ್ಧಾರ ಕೈಗೊಳ್ಳುವ ಅಧಿಕಾರ ಕೆಲವರಲ್ಲೇ ಕೇಂದ್ರೀಕೃತವಾಗಬಾರದು’: BRICSನಲ್ಲಿ ಪ್ರಧಾನಿ ಮೋದಿ ಮಹತ್ವದ ಕರೆ

‘ಜಾಗತಿಕ ದಕ್ಷಿಣ ರಾಷ್ಟ್ರಗಳು ನಿಯಮ ರೂಪಿಸುವವರಾಗಬೇಕು’ – ‘ನಿರ್ಧಾರ ಕೈಗೊಳ್ಳುವ ಅಧಿಕಾರ ಕೆಲವರಲ್ಲೇ ಕೇಂದ್ರೀಕೃತವಾಗಬಾರದು’: BRICSನಲ್ಲಿ ಮೋದಿ ಮಹತ್ವದ ಕರೆ

ದೆಹಲಿ: ಬ್ರಿಕ್ಸ್‌ ಅನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ ಜಾಗತಿಕ ಆಡಳಿತ ವ್ಯವಸ್ಥೆಯಲ್ಲೂ ಅಗತ್ಯವಾದ ಸುಧಾರಣೆಗಳನ್ನು ತರಲು ದಾರಿ ರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಜಾಗತಿಕ ಆಡಳಿತ ವ್ಯವಸ್ಥೆಯ ಸ್ವರೂಪದ ಕುರಿತು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಆಡಳಿತದ ಪ್ರಸ್ತುತ ರಚನೆಯನ್ನು ಪಿರಮಿಡ್‌ಗೆ ಹೋಲಿಸಿದ ಪ್ರಧಾನಿ ಮೋದಿ, ಅಧಿಕಾರ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಮೇಲ್ಭಾಗದಲ್ಲಿ ಹೆಚ್ಚು ಕೇಂದ್ರೀಕೃತವಾಗಿದೆ ಎಂದು ಹೇಳಿದರು. ಆದರೆ, ಆ ನಿರ್ಧಾರಗಳಿಂದ ಪರಿಣಾಮಕ್ಕೊಳಗಾಗುವ ಹಲವು ರಾಷ್ಟ್ರಗಳು ಕೆಳ ಹಂತದಲ್ಲಿದ್ದು, ನಿರ್ಧಾರಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಅವುಗಳ ಪಾತ್ರ ಸೀಮಿತವಾಗಿದೆ ಎಂದು ಅವರು ವಿವರಿಸಿದರು.

ಈ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದ್ದು, ಜಾಗತಿಕ ದಕ್ಷಿಣ ರಾಷ್ಟ್ರಗಳಿಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಧ್ವನಿ ಮತ್ತು ಪ್ರಾತಿನಿಧ್ಯ ದೊರೆಯಬೇಕು ಎಂಬುದು ಭಾರತದ ಪ್ರಮುಖ ನಿಲುವಾಗಿದೆ. ವಿಶೇಷವಾಗಿ ವಿಶ್ವಸಂಸ್ಥೆ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳು ಇಂದಿನ ಜಾಗತಿಕ ವಾಸ್ತವಗಳನ್ನು ಪ್ರತಿಬಿಂಬಿಸುವಂತೆ ಸುಧಾರಿಸಬೇಕೆಂದು ಭಾರತ ನಿರಂತರವಾಗಿ ಪ್ರತಿಪಾದಿಸುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸುಧಾರಣೆಯ ಅಗತ್ಯವನ್ನೂ ಭಾರತ ಒತ್ತಿಹೇಳುತ್ತಿದೆ.

2026ರ BRICS ಶೃಂಗಸಭೆ ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ ನಡೆಯುತ್ತಿದ್ದು, ಭಾರತ ನಾಲ್ಕನೇ ಬಾರಿಗೆ BRICS ಅಧ್ಯಕ್ಷತೆಯನ್ನು ವಹಿಸಿದೆ. ‘Building for Resilience, Innovation, Cooperation and Sustainability’ ಎಂಬ ಆಶಯದಡಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ಜಾಗತಿಕ ಆಡಳಿತ ಸುಧಾರಣೆ, ಬಹುಪಕ್ಷೀಯತೆ, ಆರ್ಥಿಕ ಸಹಕಾರ, ವ್ಯಾಪಾರ, ತಂತ್ರಜ್ಞಾನ, ಇಂಧನ ಮತ್ತು ಜಾಗತಿಕ ಸಂಘರ್ಷಗಳಂತಹ ಹಲವು ಪ್ರಮುಖ ವಿಚಾರಗಳು ಚರ್ಚೆಯಾಗುತ್ತಿವೆ.

ಪ್ರಸ್ತುತ BRICS ವೇದಿಕೆಯು ಜಾಗತಿಕ ಜನಸಂಖ್ಯೆ ಮತ್ತು ಆರ್ಥಿಕತೆಯಲ್ಲಿ ದೊಡ್ಡ ಪಾಲನ್ನು ಪ್ರತಿನಿಧಿಸುವ ಮಟ್ಟಕ್ಕೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯನ್ನು ಜಾಗತಿಕ ನಿರ್ಧಾರ ಪ್ರಕ್ರಿಯೆಯಲ್ಲಿ ಮತ್ತಷ್ಟು ಬಲಪಡಿಸುವ ಪ್ರಯತ್ನಕ್ಕೆ ಈ ಶೃಂಗಸಭೆ ಮಹತ್ವ ಪಡೆದುಕೊಂಡಿದೆ.

ಇದೇ ವೇಳೆ, BRICS ರಾಷ್ಟ್ರಗಳು ಜಾಗತಿಕ ಆಡಳಿತ ಸಂಸ್ಥೆಗಳ ಸುಧಾರಣೆ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಹಾಗೂ ಬಹುಪಕ್ಷೀಯ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಸಾಮಾನ್ಯ ನಿಲುವು ರೂಪಿಸಲು ಪ್ರಯತ್ನಿಸುತ್ತಿವೆ. ಶೃಂಗಸಭೆಯ ಅಂತಿಮ ಘೋಷಣೆಯಲ್ಲೂ ಈ ವಿಚಾರಗಳಿಗೆ ಸ್ಥಾನ ದೊರೆಯುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ‘ಪಿರಮಿಡ್’ ರೂಪಕವು ಕೇವಲ BRICS ಕುರಿತ ಹೇಳಿಕೆಯಲ್ಲದೆ, ಜಾಗತಿಕ ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆಯಲ್ಲಿ ಸಮಾನತೆ ಮತ್ತು ಹೆಚ್ಚು ಪ್ರತಿನಿಧಿತ್ವಕ್ಕಾಗಿ ಭಾರತದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದಂತಾಗಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.