ಬಳ್ಳಾರಿ: ಬಿಜೆಪಿಯ ‘ಬಳ್ಳಾರಿ ಚಲೋ’ ಪಾದಯಾತ್ರೆ ಹಾಗೂ ಸಮಾವೇಶದ ಕುರಿತು ಮಾಜಿ ಸಚಿವ ಬಿ. ನಾಗೇಂದ್ರ ವ್ಯಂಗ್ಯವಾಡಿದ್ದು, ಬಿಜೆಪಿಯವರಿಗೆ ಯಾವುದೇ ಪ್ರಮುಖ ವಿಷಯವಿಲ್ಲದ ಕಾರಣ ಪಾದಯಾತ್ರೆ ನಡೆಸಿದ್ದಾರೆ ಎಂದು ಟೀಕಿಸಿದ್ದಾರೆ.
ರೂಪನಗುಡಿ ಗ್ರಾಮದಲ್ಲಿ ಮಾತನಾಡಿದ ನಾಗೇಂದ್ರ, ‘ಬಿಜೆಪಿ ನಾಯಕರಿಗೆ ಮನೆಯಲ್ಲಿ ನಡೆಯಲು ಸಮಯವಿರಲಿಲ್ಲ. ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಫ್ಯಾಟ್ ಕಡಿಮೆ ಮಾಡಿಕೊಳ್ಳಲು ಪಾದಯಾತ್ರೆ ಮಾಡಿದ್ದಾರೆ’ ಎಂದು ಲೇವಡಿ ಮಾಡಿದರು. ಪಾದಯಾತ್ರೆಯಿಂದ ಒಬ್ಬರು ಐದು ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಬಿಜೆಪಿಯವರ ಪಾದಯಾತ್ರೆಯನ್ನು ಸ್ವಾಗತಿಸುವುದಾಗಿ ಹಾಗೂ ಅವರ ಆರೋಗ್ಯ ಮತ್ತು ಆಯುಷ್ಯ ಉತ್ತಮವಾಗಿರಲಿ ಎಂದು ಹಾರೈಸಿದರು.
ಬಿಜೆಪಿಗೆ ಹೆದರಿ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ನಾಗೇಂದ್ರ, ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿದರು. ಬಿಜೆಪಿಯಲ್ಲಿನ ಕೆಟ್ಟತನವನ್ನು ತೊಳೆದುಹಾಕಲು ಪಾದಯಾತ್ರೆ ನಡೆಸಿದ್ದಾರೆ ಎಂದು ಟೀಕಿಸಿದರು.
2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಲಿಷ್ಠವಾಗಿ ಬರಲಿ. ಅವರ ಎರಡು ಪಟ್ಟು ಬಲವನ್ನು ಕಾಂಗ್ರೆಸ್ ಎದುರಿಸಲಿದೆ ಎಂದು ನಾಗೇಂದ್ರ ಸವಾಲು ಹಾಕಿದರು. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ 10 ಸ್ಥಾನ ಗೆಲ್ಲಲಿದೆ ಎಂಬ ಸವಾಲನ್ನು ಸ್ವೀಕರಿಸುವುದಾಗಿ ಹೇಳಿದ ಅವರು, ಬಳ್ಳಾರಿ ಮಾತ್ರವಲ್ಲದೆ ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಆಯೋಜಿಸಿದ್ದ ಪಾದಯಾತ್ರೆ ಹಾಗೂ ಸಮಾವೇಶಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗಿದೆ ಎಂದು ನಾಗೇಂದ್ರ ಹೇಳಿದರು. ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಮತ್ತು ಸಮಾವೇಶಕ್ಕೆ ಮೈದಾನ ಬಳಕೆಗೆ ಅನುಮತಿಯನ್ನೂ ನೀಡಲಾಗಿತ್ತು. ಆದರೂ ಬಿಜೆಪಿಯವರು ಈ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಳ್ಳಾರಿಯ ಕೆಲ ‘ಸೋ ಕಾಲ್ಡ್ ಲೀಡರ್‌ಗಳು’ ಮೈದಾನದ ವಿಚಾರದಲ್ಲಿ ತಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ದೂರಿದ ಅವರು, ರಾಜಕೀಯ ಲಾಭಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಬಿಜೆಪಿ ನಾಯಕರ ಹೇಳಿಕೆಗಳಿಗೆ ಚುನಾವಣಾ ರಣರಂಗದಲ್ಲೇ ಉತ್ತರ ನೀಡುವುದಾಗಿ ಹೇಳಿದರು.
ಇದೇ ವೇಳೆ, ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಜಾರಿ ನಿರ್ದೇಶನಾಲಯದ (ED) ದಾಳಿ ರಾಜಕೀಯ ಪ್ರೇರಿತ ಎಂದು ನಾಗೇಂದ್ರ ಆರೋಪಿಸಿದರು. ಸತೀಶ್ ಜಾರಕಿಹೊಳಿ ಅವರು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ಅಲಂಕರಿಸುವ ಆಕಾಂಕ್ಷೆ ಹೊಂದಿರುವುದರಿಂದಲೇ ಅವರನ್ನು ಗುರಿಯಾಗಿಸಲಾಗಿದೆ ಎಂದು ದೂರಿದರು. ಕಾಂಗ್ರೆಸ್ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಬಲ ತುಂಬುವ ನಾಯಕರನ್ನು ಗುರಿಯಾಗಿಸಿಕೊಂಡು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದರು.
ಬಿಜೆಪಿ ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ಪ್ರತಿಯಾಗಿ ಬಳ್ಳಾರಿಯಲ್ಲಿ ಕಾಂಗ್ರೆಸ್ ವತಿಯಿಂದ ಶೀಘ್ರದಲ್ಲೇ ಸಮಾವೇಶ ಆಯೋಜಿಸುವ ಚರ್ಚೆ ನಡೆದಿದೆ ಎಂದು ನಾಗೇಂದ್ರ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಈ ಸಮಾವೇಶ ಆಯೋಜಿಸಲಾಗುತ್ತಿದೆ ಎಂದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ನಡೆದಿರುವ ಸಾವಿರಾರು ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಉದ್ದೇಶವಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಚರ್ಚಿಸಿದ ಬಳಿಕ ಸಮಾವೇಶದ ದಿನಾಂಕ ನಿಗದಿಪಡಿಸಲಾಗುವುದು ಎಂದು ನಾಗೇಂದ್ರ ತಿಳಿಸಿದರು. ಇದು ಕೇವಲ ಬಿಜೆಪಿಯ ಪಾದಯಾತ್ರೆಗೆ ಕೌಂಟರ್ ನೀಡುವ ಕಾರ್ಯಕ್ರಮವಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















