ಬೆಂಗಳೂರು: ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಹಾಗೂ ಕುಟುಂಬದ ವಿರುದ್ಧ ನಡೆಯುತ್ತಿರುವ ನಿರಂತರ ತೇಜೋವಧೆ ಮತ್ತು ಹಳೆಯ ವಿಡಿಯೋಗಳ ತಿರುಚುವಿಕೆಯ ವಿರುದ್ಧ ‘ಬಿಗ್ ಬಾಸ್’ ಖ್ಯಾತಿಯ ನಟಿ ಅಶ್ವಿನಿ ಗೌಡ ಕಾನೂನು ಸಮರ ಪ್ರಾರಂಭಿಸಿದ್ದಾರೆ. ವೈಯಕ್ತಿಕ ಘನತೆ ಹಾಗೂ ಕುಟುಂಬದ ನೆಮ್ಮದಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆ ಹೋಗಿರುವ ನಟಿ, ಮಾನಹಾನಿ ಮೊಕದ್ದಮೆ ದಾಖಲಿಸಿ ಮಧ್ಯಂತರ ತಡೆಯಾಜ್ಞೆ ಪಡೆದುಕೊಂಡಿದ್ದಾರೆ.
ಕಳೆದ ಎರಡು ದಶಕಗಳಿಂದ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಅಶ್ವಿನಿ ಗೌಡ, ‘ಬಿಗ್ ಬಾಸ್’ ಶೋ ಮೂಲಕ ಮತ್ತಷ್ಟು ಮನೆಮಾತಾಗಿದ್ದರು. ಆದ್ರೆ ಶೋನಿಂದ ಹೊರಬಂದ ನಂತರ ಕೆಲ ಕಿಡಿಗೇಡಿಗಳು ಅವರ ವೈಯಕ್ತಿಕ ಹಾಗೂ ವೈವಾಹಿಕ ಜೀವನದ ಕುರಿತು ಆಧಾರರಹಿತ ಅಪಪ್ರಚಾರ ಮಾಡಲು ಪ್ರಾರಂಭಿಸಿದ್ದರು. ಸಂದರ್ಶನಗಳನ್ನು ಸಂದರ್ಭದಿಂದ ಬೇರ್ಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿತ್ತು. ಇದರಿಂದ ಸಾರ್ವಜನಿಕವಾಗಿ ವ್ಯಕ್ತಿತ್ವಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ದೂರು ನೀಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು, ಅಶ್ವಿನಿ ಗೌಡ ಹಾಗೂ ಕುಟುಂಬದ ವಿರುದ್ಧ ಯಾವುದೇ ಮಾನಹಾನಿಕರ ವಿಡಿಯೋ, ಫೋಟೋ ಅಥವಾ ಸುದ್ದಿಗಳನ್ನು ಪ್ರಸಾರ ಮಾಡಬಾರದೆಂದು ತಡೆಯಾಜ್ಞೆ ನೀಡಿದೆ. ಅಲ್ಲದ.. ಈಗಾಗಲೇ ಯೂಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಲಾದ ಅವಹೇಳನಕಾರಿ ವಿಷಯಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ಆದೇಶಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಶ್ವಿನಿ ಗೌಡ, ತಮ್ಮ ಮೌನವನ್ನು ಯಾರೂ ದೌರ್ಬಲ್ಯವೆಂದು ಭಾವಿಸಬಾರದು ಎಂದು ಎಚ್ಚರಿಸಿದ್ದಾರೆ. ತಾನೊಬ್ಬ ಕಲಾವಿದೆ, ತಾಯಿ ಮತ್ತು ಮಗಳಾಗಿದ್ದು, ಮಗನ ಭವಿಷ್ಯವೇ ತಮಗೆ ಮುಖ್ಯ ಎಂದಿದ್ದಾರೆ. ಸತ್ಯ ತಿಳಿಯದೆ ಹರಡಿದ ಸುಳ್ಳು ಸುದ್ದಿಗಳು ತಾಯಿ ಹಾಗೂ ಮಗನಿಗೆ ಆಳವಾದ ನೋವುಂಟು ಮಾಡಿವೆ ಎಂದು ಬೇಸರ ವ್ಯಕ್ತಪಡಿಸಿರುವ ಅಶ್ವಿನಿ ಗೌಡ, ಇನ್ಮುಂದೆ ತಮ್ಮ ಹೋರಾಟ ಕಾನೂನಿನ ಮೂಲಕವೇ ಇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.





















