SK Home Ad
Home ಸಿನಿ ಮಿಲ್ಸ್ ಡ್ಯಾನ್ಸ್ ಫ್ಲೋರ್‌ನಲ್ಲಿ ತಾಯಂದಿರ ಮ್ಯಾಜಿಕ್: ಶುರುವಾಗ್ತಿದೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್– ಸೂಪರ್ ಮಾಮ್’ ಶೋ !

ಡ್ಯಾನ್ಸ್ ಫ್ಲೋರ್‌ನಲ್ಲಿ ತಾಯಂದಿರ ಮ್ಯಾಜಿಕ್: ಶುರುವಾಗ್ತಿದೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್– ಸೂಪರ್ ಮಾಮ್’ ಶೋ !

0
51

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ‘ಜೀ ಕನ್ನಡ’ಕರ್ನಾಟಕದ ತಾಯಂದಿರ ನೃತ್ಯ ಪ್ರತಿಭೆ ಮತ್ತು ಕನಸುಗಳಿಗೆ ಹೊಸ ರೆಕ್ಕೆ ನೀಡಲು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ರಿಯಾಲಿಟಿ ಶೋನೊಂದಿಗೆ ಮತ್ತೊಮ್ಮೆ ವೀಕ್ಷಕರ ಮನೆಮನ ತಲುಪಲು ಸಜ್ಜಾಗಿದೆ. ಇದೇ ಸೆಪ್ಟೆಂಬರ್ 12ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಕುಟುಂಬ, ಉದ್ಯೋಗ ಹಾಗೂ ದಿನನಿತ್ಯದ ನೂರಾರು ಜವಾಬ್ದಾರಿಗಳ ನಡುವೆಯೂ ತಮ್ಮ ಆಸಕ್ತಿ ಮತ್ತು ನೃತ್ಯದ ಮೇಲಿನ ಪ್ರೀತಿಯನ್ನು ಜೀವಂತವಾಗಿರಿಸಿಕೊಂಡಿರುವ ಸ್ಪೂರ್ತಿದಾಯಕ ಅಮ್ಮಂದಿರ ಕಥೆಗಳೇ ಈ ಶೋನ ಪ್ರಮುಖ ಆಕರ್ಷಣೆಯಾಗಲಿವೆ.

ಅಮ್ಮಂದಿರು ತಮ್ಮ ಜೀವನದ ಬಹುಪಾಲು ಸಮಯವನ್ನು ಕುಟುಂಬ ಮತ್ತು ಮನೆಗಾಗಿ ಮುಡಿಪಾಗಿಡುತ್ತಾರೆ. ಈ ಜವಾಬ್ದಾರಿಗಳ ನಡುವೆ ಅವರ ಸ್ವಂತ ಆಸೆ-ಆಕಾಂಕ್ಷೆಗಳು ಮತ್ತು ಕನಸುಗಳು ಕೆಲವೊಮ್ಮೆ ಹಿಂದೆ ಸರಿಯುತ್ತವೆ. ಅಂತಹ ತಾಯಂದಿರಿಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ತಮ್ಮ ನೃತ್ಯದ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ಕಂಡುಕೊಳ್ಳಲು ಹಾಗೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಒಂದು ಉತ್ತಮ ವೇದಿಕೆಯಾಗಲಿದೆ. ವರ್ಷಗಳಿಂದ ಬದಿಗೊತ್ತಿದ್ದ ಕನಸುಗಳಿಗೆ ಮರುಜೀವ ನೀಡುವುದರ ಜೊತೆಗೆ, ತಮ್ಮ ಪ್ರತಿಭೆ ಮತ್ತು ಆತ್ಮವಿಶ್ವಾಸವನ್ನು ಮತ್ತೊಮ್ಮೆ ಪ್ರದರ್ಶಿಸಲು ಈ ರಿಯಾಲಿಟಿ ಶೋ ತಾಯಂದಿರಿಗೆ ಅವಕಾಶ ಕಲ್ಪಿಸುತ್ತಿದೆ.

ಆಡಿಷನ್ ಸಂಚಿಕೆಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿರುವ ತಾಯಂದಿರನ್ನು ವೀಕ್ಷಕರಿಗೆ ಪರಿಚಯಿಸಲಾಗುತ್ತದೆ. ನೃತ್ಯದ ಮೇಲಿನ ತಮ್ಮ ಆಸಕ್ತಿ ಮತ್ತು ಪ್ರತಿಭೆಯನ್ನು ವೇದಿಕೆಯಲ್ಲಿ ಪ್ರದರ್ಶಿಸಲಿರುವ ಈ ತಾಯಂದಿರು, ತಮ್ಮ ವೈಯಕ್ತಿಕ ಬದುಕಿನ ಪಯಣ, ಕನಸುಗಳು ಹಾಗೂ ಆಕಾಂಕ್ಷೆಗಳನ್ನೂ ಹಂಚಿಕೊಳ್ಳಲಿದ್ದಾರೆ. ಕುಟುಂಬ ಮತ್ತು ಇತರ ಜವಾಬ್ದಾರಿಗಳ ನಡುವೆ ತಮ್ಮ ಕನಸುಗಳಿಗೆ ಮತ್ತೊಮ್ಮೆ ಆದ್ಯತೆ ನೀಡುವ ಅವರ ಪ್ರಯತ್ನಗಳು ಕಾರ್ಯಕ್ರಮದ ಪ್ರಮುಖ ಹೈಲೈಟ್‌ಗಳಾಗಲಿವೆ. ಪ್ರತಿಯೊಬ್ಬ ಸ್ಪರ್ಧಿಯೂ ತನ್ನದೇ ಆದ ಕಥೆ ಮತ್ತು ನೃತ್ಯ ಶೈಲಿಯೊಂದಿಗೆ ವೇದಿಕೆಯೇರಲಿದ್ದು, ಅವರ ವೈವಿಧ್ಯಮಯ ಪ್ರದರ್ಶನಗಳು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿವೆ.

ಜನಪ್ರಿಯ ನಿರೂಪಕಿ ಅನುಶ್ರೀ ಅವರು ತಮ್ಮ ವಿಶಿಷ್ಟ ನಿರೂಪಣಾ ಶೈಲಿಯ ಮೂಲಕ ಈ ಶೋವನ್ನು ನಡೆಸಿಕೊಡಲಿದ್ದಾರೆ. ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿರುವ ತೀರ್ಪುಗಾರರ ಬಳಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಖ್ಯಾತ ನಿರ್ದೇಶಕ ತರುಣ್ ಸುಧೀರ್, ನಟ ವಿಜಯ್ ರಾಘವೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಇರಲಿದ್ದಾರೆ. ತಮ್ಮ ಅನುಭವ ಮತ್ತು ವಿಭಿನ್ನ ದೃಷ್ಟಿಕೋನಗಳ ಮೂಲಕ ತೀರ್ಪುಗಾರರು ಸ್ಪರ್ಧಿಗಳ ಪ್ರದರ್ಶನವನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ, ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ವಿವಿಧ ಹಿನ್ನೆಲೆಯಿಂದ ಬಂದಿರುವ ಅಮ್ಮಂದಿರು ತಮ್ಮದೇ ಆದ ಅನುಭವ, ವ್ಯಕ್ತಿತ್ವ ಮತ್ತು ನೃತ್ಯ ಪ್ರತಿಭೆಯೊಂದಿಗೆ ವೇದಿಕೆಯೇರಲಿದ್ದು, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ನಲ್ಲಿ ವಿಭಿನ್ನ ಪ್ರದರ್ಶನಗಳು ಹಾಗೂ ಅವರ ಬದುಕಿನ ಕಥೆಗಳು ವೀಕ್ಷಕರಿಗೆ ಪರಿಚಯವಾಗಲಿವೆ. ಕುಟುಂಬದವರ ಕನಸುಗಳಿಗೆ ಸದಾ ಬೆಂಬಲವಾಗಿ ನಿಂತಿರುವ ಈ ತಾಯಂದಿರು, ಇದೀಗ ತಮ್ಮದೇ ಕನಸುಗಳನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಡುತ್ತಿದ್ದಾರೆ.

ಸೆಪ್ಟೆಂಬರ್ 12 ಮತ್ತು 13ರಂದು ರಾತ್ರಿ 7:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ಕಾರ್ಯಕ್ರಮವನ್ನು ವೀಕ್ಷಿಸಿ. ಹಾಗೆಯೇ ಈ ಕಾರ್ಯಕ್ರಮವನ್ನು ಯಾವುದೇ ಸಮಯದಲ್ಲೂ ಕನ್ನಡ ZEE5 ವೀಕ್ಷಿಸಬಹುದು.