SK Home Ad
Home ಸಿನಿ ಮಿಲ್ಸ್ ‘ರಣಬಾಲಿ’ ಧಮಾಕ: ವಿಜಯ್ ದೇವರಕೊಂಡ – ರಶ್ಮಿಕಾ ನಟನೆಯ ಪ್ಯಾನ್-ಇಂಡಿಯಾ ಚಿತ್ರದ ಟೀಸರ್ ರಿಲೀಸ್!

‘ರಣಬಾಲಿ’ ಧಮಾಕ: ವಿಜಯ್ ದೇವರಕೊಂಡ – ರಶ್ಮಿಕಾ ನಟನೆಯ ಪ್ಯಾನ್-ಇಂಡಿಯಾ ಚಿತ್ರದ ಟೀಸರ್ ರಿಲೀಸ್!

0
14

ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ರಾಹುಲ್ ಸಂಕೃತ್ಯನ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಪ್ಯಾನ್-ಇಂಡಿಯಾ ಆ್ಯಕ್ಷನ್ ಚಿತ್ರ ‘ರಣಬಾಲಿ’ಯ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಈ ಬೃಹತ್ ಸಿನಿಮಾವನ್ನು ನಿರ್ಮಿಸುತ್ತಿದ್ದು, ದಸರಾ ಹಬ್ಬದ ಅಂಗವಾಗಿ ಅಕ್ಟೋಬರ್ 16ರಂದು ಚಿತ್ರ ಜಾಗತಿಕವಾಗಿ ತೆರೆಕಾಣಲಿದೆ.

1854 ರಿಂದ 1878ರ ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದಲ್ಲಿ ರಾಯಲಸೀಮೆ ಪ್ರಾಂತ್ಯದಲ್ಲಿ ನಡೆದ ರೋಚಕ ನೈಜ ಘಟನೆಗಳನ್ನು ಆಧರಿಸಿ ಈ ಪಿರಿಯಾಡಿಕ್ ಡ್ರಾಮಾ ತಯಾರಾಗಿದೆ. ವಿಜಯ್ ದೇವರಕೊಂಡ ಶಕ್ತಿಶಾಲಿ ಯೋಧ ‘ರಣಬಾಲಿ’ ಪಾತ್ರದಲ್ಲಿ ಅಬ್ಬರಿಸಿದ್ದರೆ, ರಶ್ಮಿಕಾ ಮಂದಣ್ಣ ಅವರ ಪತ್ನಿ ‘ಜಯಮ್ಮ’ನಾಗಿ ಬಣ್ಣಹಚ್ಚಿದ್ದಾರೆ. ‘ಗೀತ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ನಂತರ ಈ ಹಿಟ್ ಜೋಡಿ ಮೂರನೇ ಬಾರಿಗೆ ಒಂದಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಬ್ರಿಟಿಷ್ ಅಧಿಕಾರಿಯಾಗಿ ಮುಖ್ಯ ಖಳನಾಯಕನ ಪಾತ್ರದಲ್ಲಿದ್ದಾರೆ.

ಟೀಸರ್ ಜೊತೆ ಶಕ್ತಿಯುತ ಸಾಲುಗಳನ್ನು ಹಂಚಿಕೊಂಡಿರುವ ಚಿತ್ರತಂಡ, ಬ್ರಿಟಿಷರ ವಿರುದ್ಧದ ಹೋರಾಟ ಹಾಗೂ ಸ್ವಾಭಿಮಾನದ ಕಥೆಯನ್ನು ಅನಾವರಣಗೊಳಿಸಿದೆ. ನಟ ವಿಜಯ್ ದೇವರಕೊಂಡ, “ನಮ್ಮ ನೆಲವನ್ನು ಶೋಷಿಸಿದವರ ವಿರುದ್ಧ ರಕ್ತ ಹರಿಸಲು ನಿರ್ಧರಿಸಿದ ಹಳ್ಳಿಗಳ ಸ್ವಾಭಿಮಾನಿ ಜನರನ್ನು ಎಂದಿಗೂ ಮರೆಯಬೇಡಿ” ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಜಯ್-ಅತುಲ್ ಸಂಗೀತ ಸಂಯೋಜನೆ ಹಾಗೂ ನೀರವ್ ಶಾ ಮತ್ತು ಜಿಷ್ಣು ಭಟ್ಟಾಚಾರ್ಜಿ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರಸ್ತುತ ಅಂತಿಮ ಹಂತದ ಚಿತ್ರೀಕರಣದಲ್ಲಿದ್ದು, ‘ರಣಬಾಲಿ’ ಅಕ್ಟೋಬರ್ 16ರಂದು ಬಹುಭಾಷೆಗಳಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡಲಿದೆ.