SK Home Ad
Home ಸಿನಿ ಮಿಲ್ಸ್ ‘ಲವ್ ಟುವರ್ಡ್ಸ್ ಫ್ಯಾಮಿಲಿ’ ಚಿತ್ರದ ಎರಡನೇ ಗೀತೆ ‘ಹೇ ನವಿಲೆ’ ಬಿಡುಗಡೆ

‘ಲವ್ ಟುವರ್ಡ್ಸ್ ಫ್ಯಾಮಿಲಿ’ ಚಿತ್ರದ ಎರಡನೇ ಗೀತೆ ‘ಹೇ ನವಿಲೆ’ ಬಿಡುಗಡೆ

0
42
ಕುಂದಾಪುರದ ಬಳಿಕ ‘ಹೇ ನವಿಲೆ’: ‘ಲವ್ ಟುವರ್ಡ್ಸ್ ಫ್ಯಾಮಿಲಿ’ ತಂಡದಿಂದ ಮತ್ತೊಂದು ಹಾಡು

ಹುಬ್ಬಳ್ಳಿ: ಈಗಾಗಲೇ ‘ಕುಂದಾಪುರದ ಹೆಣ್ಣಿವಳು’ ಹಾಡಿನ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ‘ಲವ್ ಟುವರ್ಡ್ಸ್ ಫ್ಯಾಮಿಲಿ’ ಸಿನಿಮಾದ ಎರಡನೇ ಗೀತೆ ‘ಹೇ ನವಿಲೆ’ ಇದೀಗ ಬಿಡುಗಡೆಯಾಗಿದೆ. ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಹೊಸ ಹಾಡನ್ನು ಅನಾವರಣಗೊಳಿಸಲಾಗಿದ್ದು, ಸಿನಿಮಾ ತಂಡ ಮತ್ತಷ್ಟು ಪ್ರಚಾರ ಕಾರ್ಯಗಳಿಗೆ ವೇಗ ನೀಡಿದೆ. ‘ಹೇ ನವಿಲೆ’ ಹಾಡು ಇತ್ತಿಚೆಗೆ ಮ್ಯೂಸಿಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಿದ್ದು ಸದ್ದು ಮಾಡುತ್ತಿದೆ.

‘ಹೇ ನವಿಲೆ’ ಗೀತೆಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ನಿತೇಶ್ ಸಿಂಗ್ ರಜಪೂತ್ ಹಾಗೂ ಸುರಭಿ ಭಾರದ್ವಾಜ್ ಧ್ವನಿ ನೀಡಿದ್ದಾರೆ. ಆನಂದ್ ರಾಜಾ ವಿಕ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಸಂಗೀತಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಡುಗಡೆಯಾಗಿರುವ ‘ಕುಂದಾಪುರದ ಹೆಣ್ಣಿವಳು’ ಹಾಡಿಗೂ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ.

ವಿಶೇಷ ಕಥಾಹಂದರ ಹೊಂದಿರುವ ‘ಲವ್ ಟುವರ್ಡ್ಸ್ ಫ್ಯಾಮಿಲಿ’ ಸಿನಿಮಾ ಸಾವು ಮತ್ತು ತಿಥಿಯ ನಡುವಿನ 11 ದಿನಗಳ ಅವಧಿಯಲ್ಲಿ ನಡೆಯುವ ಪ್ರೇಮ ಹಾಗೂ ಕೌಟುಂಬಿಕ ಕಥೆಯನ್ನು ಹೇಳುತ್ತದೆ. ಈ ವಿಭಿನ್ನ ಕಥೆಯನ್ನು ನಿರ್ದೇಶಕ ಚಂದ್ರಮೋಹನ್ ತೆರೆಗೆ ತಂದಿದ್ದಾರೆ. ಸಿನಿಮಾ ಮುಖ್ಯವಾಗಿ ನಾಯಕ-ನಾಯಕಿಯ ಸುತ್ತ ಸಾಗಲಿದ್ದು, ಕುಂದಾಪುರ ಮತ್ತು ತೀರ್ಥಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ.

ಯುವ ನಟ ಧೀರಜ್ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಅವರು ನಾಟಕ ಹಾಗೂ ಕಿರುತೆರೆಯಲ್ಲಿ ಅನುಭವ ಹೊಂದಿದ್ದು, ಈ ಚಿತ್ರದ ಮೂಲಕ ನಾಯಕನಾಗಿ ಮತ್ತೊಂದು ಹೆಜ್ಜೆ ಇಡುತ್ತಿದ್ದಾರೆ. ನಟಿ ರಾಧೆ ನಾಯಕಿಯಾಗಿ ಕಾಣಿಸಿಕೊಂಡ ಮೊದಲ ಚಿತ್ರವಾಗಲಿದೆ.

ನಿರ್ದೇಶಕ ಚಂದ್ರಮೋಹನ್ ಈ ಹಿಂದೆ ‘ಡಬಲ್ ಎಂಜಿನ್’ ಹಾಗೂ ‘ಫಾರೆಸ್ಟ್’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಿರ್ಮಾಪಕ ಬಿ.ಎಸ್. ಲಿಂಗರಾಜ್ ಬೀದರ್ ಅವರಿಗೆ ಇದು ಮೊದಲ ನಿರ್ಮಾಣದ ಚಿತ್ರವಾಗಿದ್ದು, ನಾಯಕ ಮತ್ತು ನಿರ್ದೇಶಕರ ಮೇಲಿನ ನಂಬಿಕೆಯೇ ಸಿನಿಮಾ ನಿರ್ಮಾಣಕ್ಕೆ ಕಾರಣ ಎಂದು ಅವರು ಈ ಹಿಂದೆ ಹೇಳಿಕೊಂಡಿದ್ದರು.

ಇನ್ನು ಉತ್ತರ ಕರ್ನಾಟಕದಲ್ಲಿ ಹಾಡು ಬಿಡುಗಡೆ ಮಾಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ಮಾಪಕ ಲಿಂಗರಾಜ್ ಬೀದರ್, ತಾವು ಬೆಳಗಾವಿಯಲ್ಲಿ ಹತ್ತು ವರ್ಷಗಳ ಕಾಲ ವಾಸವಾಗಿದ್ದನ್ನು ನೆನಪಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಸಿನಿಮಾ ಪ್ರೇಕ್ಷಕರ ಬೆಂಬಲ ಪಡೆದುಕೊಂಡರೆ ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ಸಿನಿಮಾ ಮಾಡುವುದಾಗಿ ಅವರು ಹೇಳಿದ್ದಾರೆ.

‘ಲವ್ ಟುವರ್ಡ್ಸ್ ಫ್ಯಾಮಿಲಿ’ ಚಿತ್ರವು ಅಕ್ಟೋಬರ್ 31, 2026ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ವಿಭಿನ್ನ ಕಥಾಹಂದರ, ಹೊಸ ಜೋಡಿ ಹಾಗೂ ಹೊಸ ಹಾಡುಗಳ ಮೂಲಕ ಸಿನಿಮಾ ಬಿಡುಗಡೆಗೂ ಮುನ್ನವೇ ಕುತೂಹಲ ಮೂಡಿಸುತ್ತಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.

ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಸ್ಥಳಿಯ ಮುಖಂಡರಾದ ಅಪ್ಪಣ್ಣ, ಅರವಿಂದ್ ಕಟಗಿ, ಮಲ್ಲಿಕಾರ್ಜುನ್ ಕುನ್ನೂರ, ಶಿವಾನಂದ್ ಮುತ್ತಣ್ಣವರ್ ಮುಂತಾದವರು ಉಪಸ್ಥಿತರಿದ್ದರು