ವಿಜಯಪುರ: ಭೀಮಾತೀರದಲ್ಲಿ ಮತ್ತೆ ರಕ್ತದ ಕೊಡಿ ಹರಿದಿದ್ದು, ಆರು ಜನರನ್ನು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಿರಾಳೆ ಮತ್ತು ಗೊಳಗಿ ಕುಟುಂಬಗಳ ಮಧ್ಯೆ ಜಮೀನು ವಿವಾದದ ಹಿನ್ನೆಲೆ ಈ ಕೊಲೆ ನಡೆದಿದೆ ಎನ್ನಲಾಗುತ್ತಿದ್ದು, ಒಂದೇ ಕುಟುಂಬದ 5 ಜನ ಹಾಗೂ ಓರ್ವ ಆಳು ಮನುಷ್ಯ ಸೇರಿದಂತೆ ಒಟ್ಟು 6 ಜನರ ಬರ್ಬರ ಹತ್ಯೆಗೆ ಇಡೀ ವಿಜಯಪುರ ಜಿಲ್ಲೆಯೇ ಬೆಚ್ಚಿ ಬೀಳುವಂತಾಗಿದೆ.
ಹಂತಕರು ಗನ್‌ನಿಂದ ಫೈರಿಂಗ್ ಮಾಡಿ, ಭೀಕರವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು, ಭೀಮಾತೀರದಲ್ಲಿ ಮತ್ತೆ ಹಳೆಯ ರಕ್ತಚರಿತ್ರೆಯ ಕರಾಳ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.
ಜಮೀನು ವಿವಾದದ ದ್ವೇಷಕ್ಕೆ 6 ಜೀವಗಳ ಬಲಿ: ನಿರಾಳೆ ಮತ್ತು ಗೊಳಗಿ ಕುಟುಂಬಗಳ ನಡುವೆ ಕಳೆದ ಹಲವು ವರ್ಷಗಳಿಂದ ಜಮೀನಿನ ವಿಚಾರವಾಗಿ ಹಗೆತನವಿತ್ತು. ಆ ಹಿನ್ನೆಲೆ ಗೋವಿಂದಪುರ ಗ್ರಾಮದ ಪ್ರಭಾವಿ ನಿರಾಳೆ ಕುಟುಂಬದ ಸದಸ್ಯರನ್ನು ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಹತ್ಯೆಯಾದವರನ್ನು ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ ಹಾಗೂ ಅವರ ತೋಟದ ಮನೆಯಲ್ಲಿದ್ದ ಶಬ್ಬಿರ್ ನದಾಫ್ ಎಂದು ಗುರುತಿಸಲಾಗಿದೆ. ಹಂತಕರ ಕ್ರೌರ್ಯಕ್ಕೆ ತೋಟದ ಮನೆಯಲ್ಲಿದ್ದ ಇಡೀ ಕುಟುಂಬವೇ ಸರ್ವನಾಶವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಗೋವಿಂದಪುರ ಗ್ರಾಮಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.






















