ವಿಜಯಪುರ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ತಡಲಗಿ ಗ್ರಾಮದ ಹನುಮವ್ವ ಮೇಟಿ ಎಂಬುವವರಿಗೆ ಸೇರಿದ ಸುಮಾರು 10 ಎಕರೆ ಜಮೀನನ್ನು ಅದೇ ಗ್ರಾಮದ ಸಾಲೋಟಗಿ ಕುಟುಂಬದವರು ಲೀಸ್ಗೆ ಪಡೆದು ಕಬ್ಬು ಬೆಳೆದಿದ್ದರು. ಈ ಬಾರಿ ಬೆಳೆದ ಕಬ್ಬನ್ನು ಕಟಾವು ಮಾಡಿಕೊಂಡು ಹೋಗಿ, ಮುಂದಿನ ವರ್ಷದಿಂದ ಜಮೀನು ಲೀಸ್ ಪಡೆಯುವುದಿಲ್ಲ ಎಂದು ಸಾಲೋಟಗಿ ಕುಟುಂಬದವರು ತಿಳಿಸಿದ್ದರು. ಆದರೆ, ಈ ಜಮೀನಿನಲ್ಲಿ ತಮಗೂ ಪಾಲಿದೆ ಎಂದು ಹನುಮವ್ವ ಮೇಟಿ ಅವರ ಸಂಬಂಧಿಕರು ತಗಾದೆ ತೆಗೆದು, ಕಬ್ಬು ಕಟಾವು ಮಾಡದಂತೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಸಾಲೋಟಗಿ ಕುಟುಂಬದವರು ಕಬ್ಬು ಕಟಾವು ಮಾಡಲು ಜಮೀನಿಗೆ ತೆರಳಿದಾಗ, ಹನುಮವ್ವ ಅವರ ಸಂಬಂಧಿಕರು ಮತ್ತು ಸಾಲೋಟಗಿ ಕುಟುಂಬದವರ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ಎರಡೂ ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ.
ಈ ವೇಳೆ ಕಲ್ಲು, ಕಟ್ಟಿಗೆ ಹಾಗೂ ಬಡಿಗೆಗಳಿಂದ ಪರಸ್ಪರ ಹಲ್ಲೆ ನಡೆದಿದೆ. ಸಾಲೋಟಗಿ ಕುಟುಂಬದ ಹನುಮಂತ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೊಲ್ಹಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.






















