ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಪದಚ್ಯುತ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಅವರಿಗೆ ಪೋಕ್ಸೊ ಪ್ರಕರಣದಲ್ಲಿ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ಪೊಲೀಸರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಜೂನ್ 3ಕ್ಕೆ ಮುಂದೂಡಿದೆ.
ವಚನಾನಂದ ಸ್ವಾಮೀಜಿ ಪಡೆದಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸ್ವಾಮೀಜಿ ಪರ ವಕೀಲ ಎಸ್.ವಿ. ಪಾಟೀಲ ಅವರು ತಕರಾರು ಅರ್ಜಿ ಸಲ್ಲಿಸಿದ್ದರು.
ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರು ಜೂನ್ 3ಕ್ಕೆ ವಿಚಾರಣೆಯನ್ನು ಮುಂದೂಡಿ ಶುಕ್ರವಾರ ಆದೇಶಿಸಿದರು. ‘ಗುರುಪೀಠದ ವಸತಿ ಶಾಲೆ ವಿದ್ಯಾರ್ಥಿಗಳಿಂದ ಸ್ವಾಮೀಜಿ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು’ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಠದ ಟ್ರಸ್ಟಿಗಳು, ವಿದ್ಯಾರ್ಥಿಗಳ ಪಾಲಕರು ಕೂಡ ಗಂಭೀರ ಆರೋಪ ಮಾಡಿದ್ದರು.
‘ಮಠದ ಟ್ರಸ್ಟಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಷಡ್ಯಂತ್ರ ನಡೆಸುತ್ತಾರೆ’ ಎಂದು ಪೋಕ್ಸೊ ಪ್ರಕರಣ ದಾಖಲಾಗುವ ಮುನ್ನವೇ ವಚನಾನಂದ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದಿದ್ದರು. ಒಂದನೇ ವಿಶೇಷ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಚನಾನಂದ ಸ್ವಾಮೀಜಿ ಅವರಿಗೆ ಜಾಮೀನು ಮಂಜೂರು ಮಾಡಿತ್ತು.




















