SK Home Ad
Home ನಮ್ಮ ಜಿಲ್ಲೆ ವಿಜಯಪುರ ಸಪ್ತಾಹದ ಬಳಿಕ ಸುರಿದ ಮಳೆ: ಈಗ ಅಮೋಘಸಿದ್ದೇಶ್ವರನಿಗೆ ಕೃಷ್ಣಾ ಜಲಾಭಿಷೇಕ

ಸಪ್ತಾಹದ ಬಳಿಕ ಸುರಿದ ಮಳೆ: ಈಗ ಅಮೋಘಸಿದ್ದೇಶ್ವರನಿಗೆ ಕೃಷ್ಣಾ ಜಲಾಭಿಷೇಕ

0
26

ವಿಜಯಪುರ: ಭೀಕರ ಬರಗಾಲ, ಮಳೆ ಇಲ್ಲದೆ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಡೋಣೂರು ಗ್ರಾಮದ ಆರಾಧ್ಯ ದೈವ ಶ್ರೀ ಅಮೋಘಸಿದ್ದೇಶ್ವರ ದೇವರ ಭವಿಷ್ಯವಾಣಿಯಂತೆ ಗ್ರಾಮಸ್ಥರು ಸಪ್ತಾಹ ಆಚರಿಸಿ, ಇದೀಗ ಚಂದ್ರಗಿರಿಯಿಂದ ಪವಿತ್ರ ಜಲ ತಂದಿದ್ದಾರೆ.

ಶ್ರೀ ಅಮೋಘಸಿದ್ದೇಶ್ವರ ದೇವರ ಗುರು ವಾಣಿಯಂತೆ, “ಗ್ರಾಮದಲ್ಲಿ ಮಳೆ ಆಗಬೇಕಾದರೆ ಸಪ್ತಾಹ ಆಚರಿಸಬೇಕು. ನಂತರ ಆಲಮಟ್ಟಿ ಚಂದ್ರಗಿರಿಯಿಂದ 51 ಕೊಡ (ಬಿಂದಿಗೆ) ನೀರನ್ನು ಎತ್ತಿನ ಬಂಡಿಯಲ್ಲಿ ತಂದು ಶ್ರೀ ಅಮೋಘಸಿದ್ದೇಶ್ವರ ಹಾಗೂ ಗ್ರಾಮದ ದೇವಾನುದೇವತೆಗಳಿಗೆ ಜಲಾಭಿಷೇಕ ಮಾಡಬೇಕು, ಆಗ ಮಳೆಯಾಗುತ್ತದೆ” ಎಂದು ನುಡಿದಿದ್ದರು.

ಮೂರು ದಿನದಲ್ಲೇ ಮಳೆ: ಗುರುವಾಣಿಯನ್ನು ಪಾಲಿಸಿದ ಗ್ರಾಮಸ್ಥರು ಮರುದಿನವೇ 5 ದಿನಗಳ ಸಪ್ತಾಹ ಹಮ್ಮಿಕೊಂಡು, ದಿನದ 24 ಗಂಟೆಯೂ ಅಖಂಡ ಭಜನೆ ಆರಂಭಿಸಿದರು. ಆಶ್ಚರ್ಯವೆಂಬಂತೆ ಮೂರೇ ದಿನದಲ್ಲಿ ಗ್ರಾಮದ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿಯಲು ಪ್ರಾರಂಭಿಸಿದೆ.

ಈ ಹಿನ್ನೆಲೆಯಲ್ಲಿ ಶನಿವಾರ 25 ಜೋಡು ಎತ್ತುಗಳೊಂದಿಗೆ ಡೋಣೂರು ಗ್ರಾಮದಿಂದ ರೈತರು ಚಂದ್ರಗಿರಿಯತ್ತ ಪಯಣ ಬೆಳೆಸಿದ್ದರು. ರವಿವಾರ ಬೆಳಿಗ್ಗೆ ಎತ್ತುಗಳಿಗೆ ಬಣ್ಣ ಹಚ್ಚಿ, ಬಂಡಿಗಳನ್ನು ಶೃಂಗರಿಸಿ, ಬಂಡಾರ ಹಾರಿಸಿ, ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಕಡೆಗೆ ಹೊರಟರು. ಸಂಜೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗುರು-ಹಿರಿಯರು ಡೊಳ್ಳು, ವಾದ್ಯ-ಭಜಂತ್ರಿಗಳೊಂದಿಗೆ ಭವ್ಯ ಸ್ವಾಗತ ಕೋರಿದರು.

ಸೋಮವಾರ ಬೆಳಿಗ್ಗೆ ಗ್ರಾಮದ ಎಲ್ಲ ದೇವರುಗಳಿಗೆ, ವಿಶೇಷವಾಗಿ ಶ್ರೀ ಅಮೋಘಸಿದ್ದೇಶ್ವರ ಹಾಗೂ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿಗೆ ಪವಿತ್ರ ಕೃಷ್ಣಾ ಜಲದಿಂದ ಜಲಾಭಿಷೇಕ ಮಾಡಲು ಸಕಲ ಸಿದ್ಧತೆ ನಡೆದಿದೆ.

ಈ ಕುರಿತಂತೆ ಡೋಣೂರು ರೈತ ಶಂಕರ ಹುಲ್ಲೂರು ಮಾತನಾಡಿ, “ಡೋಣೂರು ಗ್ರಾಮದ ರೈತರೆಲ್ಲರೂ ಒಟ್ಟಾಗಿ 25 ಜೋಡು ಎತ್ತಿನ ಬಂಡಿ ಕಟ್ಟಿಕೊಂಡು, 50ಕ್ಕೂ ಹೆಚ್ಚು ಸುಮಂಗಲೆಯರು, ನೂರಾರು ಪುರುಷರು ಪಾದಯಾತ್ರೆಯ ಮೂಲಕ ಆಲಮಟ್ಟಿ ಚಂದ್ರಗಿರಿಗೆ ತೆರಳಿ ಪವಿತ್ರ ಜಲ ತಂದಿದ್ದೇವೆ. ಸೋಮವಾರ ಶ್ರೀ ಅಮೋಘಸಿದ್ದೇಶ್ವರನಿಗೆ ಸಮರ್ಪಿಸುತ್ತೇವೆ” ಎಂದು ಹೇಳಿದರು.