SK Home Ad
Home ನಮ್ಮ ಜಿಲ್ಲೆ ವಿಜಯಪುರ ಸಚಿವ ಎಂ.ಬಿ. ಪಾಟೀಲರಿಗೂ ಡಿಜಿಟಲ್ ಅರೆಸ್ಟ್ ಬಲೆ

ಸಚಿವ ಎಂ.ಬಿ. ಪಾಟೀಲರಿಗೂ ಡಿಜಿಟಲ್ ಅರೆಸ್ಟ್ ಬಲೆ

0
20

ವಿಜಯಪುರ: ಡಿಜಿಟಲ್ ಅರೆಸ್ಟ್ ಸೇರಿದಂತೆ ಸೈಬರ್ ವಂಚನೆಯ ಗಂಭೀರ ಪ್ರಕರಣಗಳಲ್ಲಿ ಅಮಾಯಕರನ್ನು ಸಿಲುಕಿಸುವ ಜಾಲ ಸಕ್ರಿಯವಾಗಿರುವುದು ಆತಂಕಕಾರಿ ಸಂಗತಿ. ಸ್ವತಃ ತಮಗೂ ಸಿಬಿಐ ಮತ್ತು ಇ.ಡಿ. ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡಲು ಪ್ರಯತ್ನಿಸಲಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಬಹಿರಂಗಪಡಿಸಿದರು.

ಸೋಮವಾರ ಜಿಲ್ಲಾ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ನಗರದ ಪರೇಡ್ ಮೈದಾನದಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಪತ್ತೆಯಾದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ತಾನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ಇಲಾಖೆಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. ಬಳಿಕ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಾ, ತಮ್ಮ ವಿರುದ್ಧ ದೂರು ದಾಖಲಾಗಿದೆ ಎಂದು ಬೆದರಿಸಲು ಮುಂದಾಗಿದ್ದ ಎಂದು ಸಚಿವರು ತಿಳಿಸಿದರು.

“ನಾನು ಸಚಿವ ಎಂದು ಹೇಳಿದರೂ ಆತ ತನ್ನ ಪ್ರಯತ್ನ ಮುಂದುವರಿಸಿದ್ದ. ಇದು ನಕಲಿ ಕರೆ ಎಂಬುದು ಅರಿವಿಗೆ ಬಂದ ಬಳಿಕ ಅಧಿಕಾರಿಗಳ ಮೂಲಕ ಆತನನ್ನು ಪತ್ತೆಹಚ್ಚಲು ಬಲೆ ಬೀಸುವ ಪ್ರಯತ್ನ ಮಾಡಿದೆ. ಆದರೆ, ಅದು ಸಾಧ್ಯವಾಗಲಿಲ್ಲ. ಎಲ್ಲೋ ಕುಳಿತುಕೊಂಡು ಇಂತಹ ಜಾಲವನ್ನು ನಿರ್ವಹಿಸುತ್ತಿದ್ದಾರೆ” ಎಂದು ಹೇಳಿದರು.

ಡಿಜಿಟಲ್ ಅರೆಸ್ಟ್, ಬ್ಲ್ಯಾಕ್‌ಮೇಲ್ ಸೇರಿದಂತೆ ವಿವಿಧ ಸೈಬರ್ ವಂಚನೆಗಳ ಮೂಲಕ ಅನೇಕ ಅಮಾಯಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ವಂಚಕರ ಬೆದರಿಕೆಗೆ ಹೆದರಿ ಕೆಲವರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವುದು ಆಘಾತಕಾರಿ ಸಂಗತಿ. ಇಂತಹ ವಂಚನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ಅಪರಿಚಿತ ಕರೆಗಳಿಗೆ ಹೆದರಿ ಹಣ ವರ್ಗಾಯಿಸಬಾರದು ಹಾಗೂ ಇಂತಹ ಘಟನೆಗಳು ನಡೆದಾಗ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು ಎಂದು ಸಚಿವರು ಸಲಹೆ ನೀಡಿದರು.