ಉತ್ತರ ಕನ್ನಡ (ಯಲ್ಲಾಪುರ): ಅಡಿಕೆ ತೋಟದಲ್ಲಿ ದುಡಿದ ಕೂಲಿ ಕೇಳಲು ಹೋದ ಕಾರ್ಮಿಕನ ಮೇಲೆ ತೋಟದ ಮಾಲೀಕ ಏರ್ಗನ್ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಘಟನೆ ತಾಲೂಕಿನ ಗುಳ್ಳಾಪುರದಲ್ಲಿ ನಡೆದಿದ್ದು, ಕೈಗೆ ಗುಂಡು ತಗುಲಿ ಗಾಯಗೊಂಡ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಳ್ಳಾಪುರ ನಿವಾಸಿ ನಾಗರಾಜ ಮನೋಹರ ಬಾಂದೇಕರ (41) ಗಾಯಗೊಂಡ ವ್ಯಕ್ತಿಯಾಗಿದ್ದು, ಇವರು ಸುಬ್ರಹ್ಮಣ್ಯ ಮಾದೇವ ಗಾಂವಕರ ಎನ್ನುವವರ ಅಡಿಕೆ ತೋಟದಲ್ಲಿ ಕೂಲಿ ಕೆಲಸ ಮಾಡಿದ್ದರು. ಮೂರು ತಿಂಗಳಿನಿಂದ ಬಾಕಿ ಇದ್ದ ಹಣ ಕೇಳಲು ತೋಟದ ಮಾಲೀಕ, ಆರೋಪಿತ ಸುಬ್ರಹ್ಮಣ್ಯ ಗಾಂವಕರ ಅವರ ಮನೆಗೆ ಹೋದಾಗ ಹಣ ನೀಡಲು ನಿರಾಕರಿಸಿ ಕಾರ್ಮಿಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ತೋಟದಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂದು ತಗಾದೆ ತೆಗೆದಿದ್ದಾನೆ.
ಇದಕ್ಕೆ ಕಾರ್ಮಿಕ ನಾಗರಾಜ ಆಕ್ಷೇಪ ವ್ಯಕ್ತಪಡಿಸಿದಾಗ ತೋಟದ ಮಾಲೀಕ ಸಿಟ್ಟಿನಿಂದ ತನ್ನ ಬಳಿ ಇದ್ದ ಏರ್ಗನ್ನಿಂದ ಕಾರ್ಮಿಕನ ಎದೆಗೆ ಗುರಿಯಾಗಿಸಿ ಗುಂಡು ಹಾರಿಸಿದ್ದು, ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕಾರ್ಮಿಕನ ಎಡಗೈ ಹಸ್ತಕ್ಕೆ ಗುಂಡು ತಗುಲಿ ರಕ್ತಸ್ರಾವ ಆಗಿದೆ ಎಂದು ಹೇಳಲಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.






















