ಚಂಡೀಗಢ: ವೈಭವ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟನ್ಸ್‌ಗೆ 215 ರನ್‌ಗಳ ಗೆಲುವಿನ ಗುರಿಯನ್ನು ನೀಡಿದೆ.
ಐಪಿಎಲ್ ಪಂದ್ಯಾವಳಿಯ ಮಹತ್ವದ ಪಂದ್ಯವಾದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 214 ರನ್ ಕಲೆಹಾಕಿತು.
ಆರ್‌ಆರ್ ಮೊದಲ ಓವರ್‌ನಲ್ಲಿಯೇ ಯಶಸ್ವಿ ಜೈಸ್ವಾಲ್ (1), ಮತ್ತು ಎರಡನೇ ಓವರ್‌ನಲ್ಲಿ ಧ್ರುವ್ ಜುರೆಲ್ (7) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ವೈಭವ್ ಸೂರ್ಯವಂಶಿ ಮತ್ತು ರವೀಂದ್ರ ಜಡೇಜಾ ಜೋಡಿ ತಂಡಕ್ಕೆ ಆಧಾರವಾಯಿತು. ಆದರೆ, ಜಡೇಜಾ 19 ಎಸೆತದಲ್ಲಿ 34 ರನ್‌ಗಳಿಸಿ ಆಡುತ್ತಿದ್ದಾಗ ಗಾಯದ ನೋವಿನಿಂದ ಮೈದಾನದಿಂದ ಹೊರನಡೆದರು.
ನಂತರದಲ್ಲಿ ಕ್ರಿಸ್‌ಗೆ ಬಂದ ರಿಯಾನ್ ಪರಾಗ್ (11), ದಾಸುನ್ ಶನಕ (3) ಮತ್ತು ಜೋಫ್ರಾ ಆರ್ಚರ್ (7) ಮೂವರು ಮೈದಾನಕ್ಕೆ ಬರುತ್ತಿದ್ದಂತೆ ಮರಳಿ ಪೆವಿಲಿಯನ್ ಸೇರಿದರು.
ಚೇತರಿಸಿಕೊಂಡ ರವೀಂದ್ರ ಜಡೇಜಾ ಮತ್ತೇ ಆರನೇ ವಿಕೆಟ್‌ಗೆ ಮರಳಿ ಬ್ಯಾಟಿಂಗ್ ಮುಂದುವರಿಸಿದರು. ಈ ವೇಳೆ ವೈಭವ್ 47 ಎಸೆತದಲ್ಲಿ 8 ಬೌಂಡರಿ, 7 ಸಿಕ್ಸರ್‌ನಿಂದ 96 ರನ್‌ಗಳಿಸಿ ಔಟಾದರು.
ಏಳನೇ ವಿಕೆಟ್‌ಗೆ ಕ್ರಿಸ್‌ಗೆ ಬರುತ್ತಿದ್ದಂತೆ ಡೊನೊವನ್ ಫೆರೀರಾ ಗುಜರಾತ್ ಬೌಲರ್‌ಗಳನ್ನು ದಂಡಿಸಿಲು ಶುರುಮಾಡಿದರು. ಕೇವಲ 11 ಎಸೆತದಲ್ಲಿ 2 ಬೌಂಡರಿ, 4 ಸಿಕ್ಸರ್‌ನಿಂದ 38 ರನ್ ಗಳಿಸಿ ಅಜೇಯರಾಗಿ ಉಳಿದರು.
ಇನ್ನು ಗಾಯದ ಸಮಸ್ಯೆಯ ನಡುವೆಯೇ ರವೀಂದ್ರ ಜಡೇಜಾ 35 ಎಸೆತದಲ್ಲಿ 5 ಬೌಂಡರಿ, 1 ಸಿಕ್ಸರ್‌ನಿಂದ ಅಜೇಯ 45 ರನ್ ಗಳಿಸಿದರು. ಗುಜರಾತ್ ಟೈಟನ್ಸ್ ಪರ ಜೇಸನ್ ಹೋಲ್ಡರ್ 27ಕ್ಕೆ 2, ಕಗಿಸೊ ರಬಾಡ 35ಕ್ಕೆ 2, ಪ್ರಸಿದ್ಧ್ ಕೃಷ್ಣ 42ಕ್ಕೆ 1 ಮತ್ತು ಮೊಹಮ್ಮದ್ ಸಿರಾಜ್ 42ಕ್ಕೆ 1 ವಿಕೆಟ್ ಪಡೆದರು.






















