ಕಾರವಾರ: ಜಿಲ್ಲೆಯಲ್ಲಿ ಸೋಮವಾರವೂ ಮಳೆಯ ಅಬ್ಬರ ಜೋರಾಗಿ ಮುಂದುವರಿದಿದ್ದು, ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನ ಬಹುತೇಕ ತಾಲೂಕುಗಳಲ್ಲಿ ಬಿಟ್ಟು ಬಿಟ್ಟು ಉತ್ತಮ ಮಳೆಯಾಗಿದೆ.
ಕಳೆದ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯು ಕಾರವಾರದಲ್ಲಿ ಸೋಮವಾರ ಮುಂಜಾನೆ ಹಾಗೂ ಮಧ್ಯಾಹ್ನದ ಬಳಿಕ ನಿರಂತರವಾಗಿ ಅಬ್ಬರಿಸಿದೆ. ಮಳೆಯ ತೀವ್ರತೆಗೆ ಕುಮಟಾ-ಸಿದ್ದಾಪುರ ರಸ್ತೆಯಲ್ಲಿ ಮಧ್ಯಾಹ್ನ ಬೃಹತ್ ಮರವೊಂದು ಧರೆಗುರುಳಿದ ಕಾರಣ ಬಸ್ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ಕೆಲಕಾಲ ತೀವ್ರ ಅಡಚಣೆ ಉಂಟಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ವಾಹನ ಸವಾರರು ಜಂಟಿಯಾಗಿ ಮರವನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲು ಸಹಕರಿಸಿದರು.
ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಜಿಲ್ಲೆಯಲ್ಲಿ ಜೂ.30 ರಿಂದ 6 ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಗಂಟೆಗೆ 30-40 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದೆ ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಅಧಿಕೃತ ಆದೇಶ ಹೊರಡಿಸಿದೆ.
ಇನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸೋಮವಾರದ ವರದಿಯ ಪ್ರಕಾರ, ಜಿಲ್ಲೆಯ ಅಂಕೋಲಾದಲ್ಲಿ 59.4 ಭಟ್ಕಳ 72.9, ಹಳಿಯಾಳ 11.2, ಹೊನ್ನಾವರ 101, ಕಾರವಾರ 90.3, ಕುಮಟಾ 74.2, ಮುಂಡಗೋಡ 8.1, ಸಿದ್ದಾಪುರ 49.4, ಶಿರಸಿ 36, ಸೂಪಾ 20.9, ಯಲ್ಲಾಪುರ 14.3, ದಾಂಡೇಲಿ 9.9 ಸೇರಿದಂತೆ ಒಟ್ಟು 41.8 ಮಿ.ಮೀ ಮಳೆಯಾಗಿದೆ.
ಜೂನ್ 1 ರಿಂದ 29 ರವರೆಗಿನ ಒಟ್ಟಾರೆ ಮಳೆಯನ್ನು ನೋಡಿದರೆ ಜಿಲ್ಲೆಯಲ್ಲಿ ಶೇ.-51 ರಷ್ಟು ಮಳೆ ಕೊರತೆ ಇದೆ. ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.






















