ಬೆಂಗಳೂರು: ನಟಿ ಕೃಷಿ ತಾಪಂಡ ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಆಕೆಯ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ನಟಿಯ ವಿರುದ್ಧ ಹಲವು ರೀತಿಯ ಊಹಾಪೋಹಗಳು ಕೇಳಿಬರುತ್ತಿವೆ. ಈ ಎಲ್ಲ ಬೆಳವಣಿಗೆಗಳ ಬಳಿಕ ನಟಿ ಕೃಷಿ ತಾಪಂಡ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
`ನಾನು ಈ ರೀತಿ ಬರೆಯಬೇಕಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಅಲ್ಲದೇ ಈ ವಿಷಯವನ್ನು ಜಗತ್ತಿಗೆ ತಿಳಿಸಲು ನನ್ನಲ್ಲಿ ಮತ್ತು ಮಾನಸಿಕ ಶಕ್ತಿಯೂ ಇಲ್ಲ. ಇಂತಹ ಸಮಯದಲ್ಲಿ ನನ್ನ ಮುಂದಿರುವ ಒಂದೇ ಒಂದು ಆಯ್ಕೆಯೆಂದರೆ ಸಾರ್ವಜನಿಕ ಹೇಳಿಕೆ ನೀಡುವುದು’ ಎಂದಿದ್ದಾರೆ.
`ಊಹಿಸಲು ಸಾಧ್ಯವಿಲ್ಲದಂತಹ ಈ ಸಮಯದಲ್ಲಿ ನಾನು, ನನ್ನ ಸ್ನೇಹಿತರು ಹಾಗೂ ನನ್ನ ಕುಟುಂಬ ಸದಸ್ಯರ ಮೇಲೆ ಅಪಾರ ಒತ್ತಡ, ನಿರಂತರ ಊಹಾಪೋಹಗಳು ಮತ್ತು ಪದೇ ಪದೆ ಕೇಳಲಾಗುತ್ತಿರುವ ಪ್ರಶ್ನೆಗಳಿಂದಾಗಿ ನಾನು ಈಗ ಈ ಕೆಲಸ ಮಾಡಲೇಬೇಕಾಗಿದೆ. ಕಳೆದ ಕೆಲ ದಿನಗಳಲ್ಲಿ ನಾನು ಊಹಿಸದ ರೀತಿಯಲ್ಲಿ ಕೆಲವು ಘಟನೆಗಳು ನನ್ನ ಜೀವನವನ್ನು ಬದಲಿಸಿವೆ. ಜೊತೆಗೆ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ, ನನ್ನ ಕಾಳಜಿ ಮಾಡುತ್ತಿದ್ದ ಮತ್ತು ನಿಷ್ಕಲ್ಮಷ ಮನಸ್ಸಿನಿಂದ ನನ್ನೊಂದಿಗೆ ನಿಂತಿದ್ದ ವ್ಯಕ್ತಿಯೊಬ್ಬರನ್ನ ನಾನು ಕಳೆದುಕೊಂಡಿದ್ದೇನೆ. ಅವರನ್ನು ಕಳೆದುಕೊಂಡಿರುವ ನೋವನ್ನು ಕೇವಲ ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನಾನು ಮತ್ತೆ ಸಹಜ ಸ್ಥಿತಿಗೆ ಮರಳಲು ಸಾಧ್ಯವೇ ಎಂಬುದೂ ನನಗೆ ತಿಳಿಯುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ.
`ವದಂತಿಗಳನ್ನು ಹಬ್ಬಿಸುತ್ತಿರುವವರಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಆತನ ಕುಟುಂಬ, ನನ್ನ ಕುಟುಂಬ ಮತ್ತು ನಮ್ಮ ಸ್ನೇಹಿತರಿಗೆ ತೊಂದರೆ ನೀಡಬೇಡಿ. ಯಾರದ್ದೋ ಸಾವನ್ನು ಮನರಂಜನೆಯ ವಿಚಾರವಾಗಿ ಮಾಡಬೇಡಿ. ದಯವಿಟ್ಟು ಅವರ ಅಗಲಿಕೆಗೆ ಶಾಂತಿಯಿಂದ ದುಃಖಿಸಲು ಕನಿಷ್ಠ ಗೌರವ ನೀಡಿ. ಅನಗತ್ಯ ವದಂತಿ ಮತ್ತು ಪ್ರಶ್ನೆಗಳನ್ನು ನಿಲ್ಲಿಸಿ. ನಿಮಗೆ ಯಾರನ್ನಾದರೂ ನಗಿಸಲು ಸಾಧ್ಯವಾಗದಿದ್ದರೆ, ಅವರ ಕಣ್ಣೀರಿಗೆ ಕಾರಣವಾಗಬೇಡಿ. ಬದುಕಲು ಅವಕಾಶ ನೀಡಿ, ಅವರು ಜೀವನದ ಮೇಲಿನ ಭರವಸೆ ಕಳೆದುಕೊಳ್ಳಲು ಕಾರಣವಾಗಬೇಡಿ’ ಎಂದು ನಟಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.






















