ಉತ್ತರ ಕನ್ನಡ: ದಾಂಡೇಲಿ ನಗರದ ಅಭಿವೃದ್ಧಿಯ ಸಂಕೇತವಾಗಬೇಕಿದ್ದ ಭೂಗತ ಒಳಚರಂಡಿ (ಯುಜಿಡಿ) ಕಾಮಗಾರಿಯೇ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಾಂಡೇಲಿಯಿಂದ ಹಳೇ ದಾಂಡೇಲಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯುದ್ದಕ್ಕೂ ನಗರದ ವಿವಿಧ ಬಡಾವಣೆಗಳಿಂದ ಹರಿದುಬರುತ್ತಿರುವ ಶೌಚಾಲಯದ ಹೊಲಸು ತ್ಯಾಜ್ಯ ನೀರು ರಸ್ತೆ, ಗಟಾರು ಹಾಗೂ ಮಳೆನೀರಿನ ನಾಲೆಗಳ ಮೂಲಕ ನೇರವಾಗಿ ಕಾಳಿ ನದಿಯನ್ನು ಸೇರುತ್ತಿರುವ ದೃಶ್ಯಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಹುಟ್ಟಿಸಿವೆ.
ಯುಜಿಡಿ ವ್ಯವಸ್ಥೆಯ ತಾಂತ್ರಿಕ ದೋಷವೋ, ಕಾಮಗಾರಿಯ ಗುಣಮಟ್ಟದ ಕೊರತೆಯೋ ಅಥವಾ ನಿರ್ವಹಣೆಯ ವೈಫಲ್ಯವೋ ಎಂಬ ಪ್ರಶ್ನೆಗಳು ಈಗ ನಗರದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ. ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗಳ ನಡುವೆಯೂ ರಸ್ತೆಗಳ ಮೇಲೆ ಹೊಲಸು ನೀರು ಹರಿಯುತ್ತಿರುವುದು ನಗರಾಡಳಿತದ ಕಾರ್ಯಕ್ಷಮತೆಯನ್ನೇ ಪ್ರಶ್ನಿಸುವಂತಾಗಿದೆ.
ರಸ್ತೆಯಲ್ಲೇ ಹರಿಯುತ್ತಿರುವ ಹೊಲಸು ನೀರು: ದಾಂಡೇಲಿಯಿಂದ ಹಳೇ ದಾಂಡೇಲಿಗೆ ಸಾಗುವ ರಸ್ತೆಯಲ್ಲಿ ಹಲವೆಡೆ ಶೌಚಾಲಯದ ಮಲೀನ ನೀರು ನಿರಂತರವಾಗಿ ಹರಿಯುತ್ತಿರುವುದರಿಂದ ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳು, ಪಾದಚಾರಿಗಳು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಈ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದ್ದು, ರಸ್ತೆ ಮತ್ತು ಒಳಚರಂಡಿಯ ನಡುವಿನ ವ್ಯತ್ಯಾಸವೇ ಗೊತ್ತಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ದುರ್ವಾಸನೆ, ಅಸ್ವಚ್ಛತೆ ಮತ್ತು ಸೊಳ್ಳೆಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಡೆಂಗ್ಯೂ, ಮಲೇರಿಯಾ ಸೇರಿದಂತೆ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಸಾಂಕ್ರಾಮಿಕ ರೋಗಗಳ ಅಪಾಯವೂ ಹೆಚ್ಚುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಳಿ ನದಿಗೆ ಸೇರುತ್ತಿರುವ ಸಂಸ್ಕರಿಸದ ಮಲೀನ ನೀರು: ಸ್ಥಳೀಯರ ಪ್ರಕಾರ, ರಸ್ತೆಯ ಮೇಲೆ ಹರಿಯುತ್ತಿರುವ ಈ ಹೊಲಸು ನೀರು ಕೊನೆಗೆ ಗಟಾರು ಮತ್ತು ನಾಲೆಗಳ ಮೂಲಕ ಕಾಳಿ ನದಿಯನ್ನು ಸೇರುತ್ತಿದೆ. ಈ ಆರೋಪ ಸತ್ಯವಾಗಿದ್ದರೆ ಅದು ಪರಿಸರದ ದೃಷ್ಠಿಯಿಂದ ಗಂಭೀರ ಬೆಳವಣೆಗೆಯಾಗಿದೆ. ನದಿಯ ಕೆಳ ಹರಿವಿನ ಜನರ ಆರೋಗ್ಯಕ್ಕೂ ಅಪಾಯ ತಪ್ಪಿದ್ದಲ್ಲ. ನಗರಾಡಳಿತ ಎಚ್ಚೆತ್ತುಕೊಂಡು ಕ್ರಮ ಜರುಗಿಸಬೇಕಿದೆ.





















