SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಕಾಳಿ ನದಿಯ ನೀರಿನ ಗುಣಮಟ್ಟದಲ್ಲಿ ಸುಧಾರಣೆ: ಆದರೂ ಮಾಲಿನ್ಯದ ಆತಂಕ ಇನ್ನೂ ಸಂಪೂರ್ಣ ದೂರವಾಗಿಲ್ಲ

ಕಾಳಿ ನದಿಯ ನೀರಿನ ಗುಣಮಟ್ಟದಲ್ಲಿ ಸುಧಾರಣೆ: ಆದರೂ ಮಾಲಿನ್ಯದ ಆತಂಕ ಇನ್ನೂ ಸಂಪೂರ್ಣ ದೂರವಾಗಿಲ್ಲ

0
120

ದಾಂಡೇಲಿ (ಉತ್ತರ ಕನ್ನಡ ) ಸಂ.ಕ. ಸಮಾಚಾರ : ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಯಾದ ಕಾಳಿ ನದಿಯ ನೀರಿನ ಗುಣಮಟ್ಟದ ಕುರಿತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಪ್ರಕಟಿಸಿರುವ ಅಧಿಕೃತ ದಾಖಲೆಗಳು ನದಿಯ ಕೆಲವು ಪ್ರಮುಖ ನೀರಿನ ಗುಣಮಟ್ಟ ಸೂಚಕಗಳಲ್ಲಿ ಸುಧಾರಣೆ ಕಂಡಿರುವುದನ್ನು ಸೂಚಿಸುತ್ತವೆ. ಹಿಂದೆ ಮಾಲಿನ್ಯಗೊಂಡ ನದಿ ಭಾಗವೆಂದು ಗುರುತಿಸಲಾಗಿದ್ದ ಕಾಳಿ ನದಿಯ ಒಂದು ಭಾಗವನ್ನು CPCB ತನ್ನ ಇತ್ತೀಚಿನ ಪರಿಷ್ಕೃತ ಪಟ್ಟಿಯಿಂದ ಕೈಬಿಟ್ಟಿದೆ. ಇದು ಜೈವಿಕ ಮಾಲಿನ್ಯದ ಮಟ್ಟದಲ್ಲಿ ಸುಧಾರಣೆ ಕಂಡಿರುವುದನ್ನು ಸೂಚಿಸುತ್ತದೆ.

ಆದಾಗ್ಯೂ, ಕಾಳಿ ನದಿ ಸಂಪೂರ್ಣ ಮಾಲಿನ್ಯಮುಕ್ತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ದಾಂಡೇಲಿ ಹಾಗೂ ಕೆಳಹರಿವಿನ ಭಾಗಗಳಲ್ಲಿ ಕೈಗಾರಿಕೆಗಳ ಸಂಸ್ಕರಿಸಿದ ತ್ಯಾಜ್ಯ, ನಗರಗಳ ಒಳಚರಂಡಿ ನೀರು, ಕೃಷಿ ಪ್ರದೇಶಗಳಿಂದ ಹರಿದುಬರುವ ರಾಸಾಯನಿಕಗಳು, ಪ್ಲಾಸ್ಟಿಕ್ ಹಾಗೂ ಇತರ ಘನ ತ್ಯಾಜ್ಯಗಳು ನದಿಯ ಪರಿಸರದ ಮೇಲೆ ಇನ್ನೂ ಒತ್ತಡ ಬೀರುತ್ತಿವೆ ಎಂದು ವಿವಿಧ ಅಧ್ಯಯನಗಳು ಮತ್ತು ಪರಿಸರ ತಜ್ಞರು ಅಭಿಪ್ರಾಯಪಡುತ್ತಾರೆ.

ಲಭ್ಯವಿರುವ ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ನದಿಯ ಹೆಚ್ಚಿನ ಮಾದರಿಗಳಲ್ಲಿ ಜೈವಿಕ ಆಮ್ಲಜನಕ ಬೇಡಿಕೆ (BOD) 0.1 ರಿಂದ 1.1 ಮಿ.ಗ್ರಾಂ/ಲೀಟರ್ ನಡುವೆ ದಾಖಲಾಗಿದ್ದು, ಇದು ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ನೀರನ್ನು ಸೂಚಿಸುತ್ತದೆ. ಆದರೆ ಒಂದು ಅಧ್ಯಯನ ಕೇಂದ್ರದಲ್ಲಿ 21 ಮಿ.ಗ್ರಾಂ/ಲೀಟರ್ BOD ದಾಖಲಾಗಿದ್ದು, ಸ್ಥಳೀಯ ಮಟ್ಟದಲ್ಲಿ ಮಾಲಿನ್ಯದ ಒತ್ತಡವಿರಬಹುದೆಂಬ ಸೂಚನೆಯನ್ನು ನೀಡಿದೆ. ಈ ಮೌಲ್ಯವು ಇಡೀ ನದಿಯ ಸ್ಥಿತಿಯನ್ನು ಪ್ರತಿನಿಧಿಸುವುದಿಲ್ಲ; ಅದು ನಿರ್ದಿಷ್ಟ ಸ್ಥಳ ಮತ್ತು ಸಮಯದಲ್ಲಿ ಸಂಗ್ರಹಿಸಿದ ಮಾದರಿಗೆ ಮಾತ್ರ ಸಂಬಂಧಿಸಿದೆ.

KSPCB ರಾಷ್ಟ್ರೀಯ ನೀರಿನ ಗುಣಮಟ್ಟ ಮೇಲ್ವಿಚಾರಣಾ ಕಾರ್ಯಕ್ರಮದಡಿ ಕಾಳಿ ನದಿಯ ವಿವಿಧ ಕೇಂದ್ರಗಳಲ್ಲಿ ನಿಯಮಿತವಾಗಿ pH, Dissolved Oxygen (DO), BOD, COD ಹಾಗೂ ಕೊಲಿಫಾರ್ಮ್ ಬ್ಯಾಕ್ಟೀರಿಯಾ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ನೀರಿನ ಗುಣಮಟ್ಟವನ್ನು ಪರಿಶೀಲಿಸುತ್ತಿದೆ. ಪರಿಸರ ತಜ್ಞರ ಅಭಿಪ್ರಾಯದಂತೆ, ನದಿಯ ಆ ಆರೋಗ್ಯವನ್ನು ಕೇವಲ BOD ಆಧಾರದ ಮೇಲೆ ನಿರ್ಧರಿಸುವದು ಸಾಕಾಗುವುದಿಲ್ಲ.

ಹೆವಿ ಮೆಟಲ್ ಗಳು, ಜೀವ ವೈವಿಧ್ಯ, ಮೀನು ಸಂಪತ್ತು ಹಾಗೂ ಋತುಮಾನಕ್ಕೆ ಅನುಗುಣವಾಗಿ ನೀರಿನ ಗುಣಮಟ್ಟದಲ್ಲಿ ಆಗುವ ಬದಲಾವಣೆಗಳನ್ನು ನಿರಂತರವಾಗಿ ಅಧ್ಯಯನ ಮಾಡಬೇಕಾಗಿದೆ. ಸ್ಥಳೀಯ ನಿವಾಸಿಗಳು ಕೆಲವು ಪ್ರದೇಶಗಳಲ್ಲಿ ನೀರಿನ ಬಣ್ಣ, ವಾಸನೆ ಮತ್ತು ಮೀನುಗಳ ಲಭ್ಯತೆ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದರೂ ಈ ಅನುಭವಗಳನ್ನು ದೃಢಿಕರಿಸಲು ಹೆಚ್ಚಿನ ಸ್ಥಳ, ನಿರ್ದಿಷ್ಟ ವೈಜ್ಞಾನಿಕ ಅಧ್ಯಯನಗಳು ಅಗತ್ಯವಾಗಿದೆ.

ಒಟ್ಟಾರೆ, ಅಧಿಕೃತ ದಾಖಲೆಗಳ ಪ್ರಕಾರ ಕಾಳಿನದಿಯ ನೀರಿನ ಗುಣಮಟ್ಟದಲ್ಲಿ ಸುಧಾರಣೆ ಕಂಡಿದ್ದರೂ, ಪರಿಸರ ಸಂರಕ್ಷಣೆಯ ದೃಷ್ಠಿಯಿಂದ ನಿರಂತರ ಮೇಲ್ವಿಚಾರಣೆ, ಕೈಗಾರಿಕೆಗಳ ತ್ಯಾಜ್ಯ ವಿಸರ್ಜನೆ ಮೇಲೆ ಕಟ್ಟುನಿಟ್ಟಿನ ನಿಗಾ ಹಾಗೂ ನೀರಿನ ಗುಣಮಟ್ಟದ ಅಂಕಿ ಅಂಶಗಳನ್ನು ಸಾರ್ವಜನಿಕವಾಗಿ ಪಾರದರ್ಶಕವಾಗಿ ಪ್ರಕಟಿಸುವದು ಅತ್ಯಗತ್ಯವಾಗಿದೆ.