SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಸ್ವಗ್ರಾಮಕ್ಕೆ ಪಾರ್ಥಿವ ಶರೀರವಾಗಿ ಮರಳಿದ ಅಗ್ನಿವೀರ ಶಿವಪ್ಪ : ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ

ಸ್ವಗ್ರಾಮಕ್ಕೆ ಪಾರ್ಥಿವ ಶರೀರವಾಗಿ ಮರಳಿದ ಅಗ್ನಿವೀರ ಶಿವಪ್ಪ : ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ

0
130
ದೇಶ ಸೇವೆಯ ಕನಸು ಹೊತ್ತ ಯುವಕನ ದಾರುಣ ಅಂತ್ಯ: ಅಗ್ನಿವೀರ ಶಿವಪ್ಪನಿಗೆ ಅಂತಿಮ ನಮನ

ಶ್ರೀಕಾಂತ ಸರಗಣಾಚಾರಿ/ ಶ್ರೀನಿವಾಸ ಜಾಹಗೀರದಾರ.

ಸಂ.ಕ.ಸಮಾಚಾರ ಕುಷ್ಟಗಿ: ದೇಶದ ಗಡಿಯಲ್ಲಿ ತ್ರಿವರ್ಣ ಧ್ವಜದಡಿ ಸೇವೆ ಸಲ್ಲಿಸಬೇಕು ಎಂಬ ಕನಸಿನೊಂದಿಗೆ ಭಾರತೀಯ ಸೇನೆ ಸೇರಿದ್ದ 24 ವರ್ಷದ ಯುವಕನ ಬದುಕು, ಸ್ವಗ್ರಾಮದತ್ತ ಮರಳುವ ಹಾದಿಯಲ್ಲೇ ರೈಲು ದುರಂತದಲ್ಲಿ ದಾರುಣ ಅಂತ್ಯ ಕಂಡಿದೆ. ಅಗ್ನಿವೀರ ತರಬೇತಿ ಪಡೆಯುತ್ತಿದ್ದ ಮಡಕೇರಿ ಗ್ರಾಮದ ಶಿವಪ್ಪ ಹನುಮಪ್ಪ ಮುದಗಲ್ ಅವರ ಪಾರ್ಥಿವ ಶರೀರಕ್ಕೆ ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ ನೀಡಲಾಯಿತು.

ನಾಸಿಕ್‌ನ ಸೇನಾ ತರಬೇತಿ ಶಿಬಿರದಲ್ಲಿ ಅಗ್ನಿವೀರ ತರಬೇತಿ ಪಡೆಯುತ್ತಿದ್ದ ಶಿವಪ್ಪ, ಐದು ದಿನಗಳ ರಜೆ ಪಡೆದು ಸ್ವಗ್ರಾಮಕ್ಕೆ ಮರಳುತ್ತಿದ್ದ ವೇಳೆ ಮಹಾರಾಷ್ಟ್ರದ ಕಲ್ಯಾಣ ರೈಲು ನಿಲ್ದಾಣದಲ್ಲಿ ಸಂಭವಿಸಿದ ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟಿದ್ದರು. ಸೇನಾ ಸೇವೆಯ ಕನಸು ಹೊತ್ತು ಹೊರಟಿದ್ದ ಯುವಕನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಮರಳಿದ ದೃಶ್ಯ ಇಡೀ ಗ್ರಾಮವನ್ನೇ ಕಣ್ಣೀರಿನಲ್ಲಿ ಮುಳುಗಿಸಿತು.

ಮನೆಗೆ ಬಂದ ಮಗನ ಪಾರ್ಥಿವ ಶರೀರ: ಶನಿವಾರ ಬೆಳಗ್ಗೆ ಸುಮಾರು 8 ಗಂಟೆಗೆ ಶಿವಪ್ಪನ ಪಾರ್ಥಿವ ಶರೀರ ಮಡಕೇರಿಯ ಸ್ವಗೃಹಕ್ಕೆ ತಲುಪುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ದೇಶ ಸೇವೆಗೆ ತೆರಳಿದ್ದ ಮಗ ಮರಳಿ ಬರುವುದು ಪಾರ್ಥಿವ ಶರೀರವಾಗಿ ಎಂಬುದನ್ನು ಅರಗಿಸಿಕೊಳ್ಳಲಾಗದೆ ಪೋಷಕರು ಹಾಗೂ ಬಂಧುಗಳು ಕಣ್ಣೀರಿಟ್ಟ ದೃಶ್ಯ ನೆರೆದವರ ಮನಕಲಕಿತು.ಶಿವಪ್ಪನ ಅಂತಿಮ ದರ್ಶನ ಪಡೆಯಲು ಮಡಕೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸಿದ್ದರು.

ಬಂಧುಗಳು, ಸ್ನೇಹಿತರು, ಗ್ರಾಮಸ್ಥರು ಹಾಗೂ ಮಾಜಿ ಸೈನಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ದಾರಿಯುದ್ದಕ್ಕೂ ಗೌರವ ವಂದನೆ:ಶಿವಪ್ಪನ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ಸಂದರ್ಭದಲ್ಲಿ ದಾರಿಯುದ್ದಕ್ಕೂ ಜನರು ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿದರು. ‘ಅಮರ್ ರಹೇ, ಅಮರ್ ರಹೇ’ ಘೋಷಣೆಗಳು ಮೊಳಗಿದವು.

ದೇಶ ಸೇವೆಗೆ ಹೆಜ್ಜೆಯಿಟ್ಟಿದ್ದ ಗ್ರಾಮದ ಯುವಕನ ಅಕಾಲಿಕ ಅಗಲಿಕೆಗೆ ಜನರು ಕಂಬನಿ ಮಿಡಿದರು.ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಅಂತ್ಯಕ್ರಿಯೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಮಾಜಿ ಸೈನಿಕರು ಗೌರವ ಸಲ್ಲಿಸಿದರು. ಸಾವಿರಾರು ಜನರು ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಶಿವಪ್ಪನಿಗೆ ಅಂತಿಮ ನಮನ ಸಲ್ಲಿಸಿದರು.

ಕನಸು ಕಣ್ಣಲ್ಲೇ ಉಳಿಯಿತು: ಯುವ ವಯಸ್ಸಿನಲ್ಲೇ ದೇಶ ಸೇವೆಯ ಸಂಕಲ್ಪದೊಂದಿಗೆ ಸೇನೆ ಸೇರಿದ್ದ ಶಿವಪ್ಪ, ತರಬೇತಿ ಪೂರ್ಣಗೊಳಿಸಿ ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಕನಸು ಕಂಡಿದ್ದರು. ಆದರೆ ತರಬೇತಿ ಹಂತದಲ್ಲಿಯೇ ಸಂಭವಿಸಿದ ಆಕಸ್ಮಿಕ ದುರಂತ ಅವರ ಕನಸಿಗೆ ತೆರೆ ಎಳೆದಿದೆ.ದೇಶ ಸೇವೆ ಮಾಡಬೇಕು ಎಂಬ ಹಂಬಲದೊಂದಿಗೆ ಸೇನೆ ಸೇರಿದ್ದ ಯುವಕನ ಬದುಕು ಪೂರ್ಣಗೊಳ್ಳುವ ಮುನ್ನವೇ ಅಂತ್ಯಗೊಂಡಿರುವುದು ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ. ಶಿವಪ್ಪನ ಅಕಾಲಿಕ ಅಗಲಿಕೆ ಮಡಕೇರಿ ಗ್ರಾಮಕ್ಕೆ ಎಂದಿಗೂ ಮರೆಯಲಾಗದ ನೋವನ್ನು ಉಳಿಸಿದೆ.

ಅಂತಿಮ ನಮನ: ಕಾಂಗ್ರೆಸ್ ಮುಖಂಡ ದೊಡ್ಡಬಸನಗೌಡ ಪಾಟೀಲ ಬಯ್ಯಾಪುರ, ಬಿಜೆಪಿ ಮುಖಂಡ ಬಸವರಾಜ ಹಳ್ಳೂರು, ಶರಣಯ್ಯ ಹಿರೇಮಠ, ಸಂಗನಗೌಡ ಭರಮನಗೌಡ, ಕುಷ್ಟಗಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಹಂಪನಗೌಡ ಬಳೂಟಿಗಿ, ಹನುಮಂತಪ್ಪ ಹಿರೇಮನಿ, ಶಂಕರಪ್ಪ ಕವಳಿಕಾಯಿ, ವಿಜಯ್ ಭೀಮಪ್ಪ ವಡ್ಡರ್, ಶಿವಾಜಿ ಹಡಪದ್, ಕಳಕಪ್ಪ ನಾಯಕವಾಡಿ ಸೇರಿದಂತೆ ವಿವಿಧ ಮುಖಂಡರು, ಮಾಜಿ ಸೈನಿಕರು, ಗ್ರಾಮಸ್ಥರು ಹಾಗೂ ಹನುಮಸಾಗರ ಪೊಲೀಸ್ ಇಲಾಖೆಯ ಬಸಯ್ಯ ಹಿರೇಮಠ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.