SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಮಹಿಳಾ ಆಯೋಗದ ಕೆಲಸಕ್ಕೆ ಅಡ್ಡಿ ಎದುರಾಗಿಲ್ಲ

ಮಹಿಳಾ ಆಯೋಗದ ಕೆಲಸಕ್ಕೆ ಅಡ್ಡಿ ಎದುರಾಗಿಲ್ಲ

0
24

ಕೊಪ್ಪಳ: ಮಹಿಳಾ ಆಯೋಗದ ಅಧ್ಯಕ್ಷ ಹುದ್ದೆ ಸಂವಿಧಾನಾತ್ಮಕ ಅಧಿಕಾರದ ವ್ಯಾಪ್ತಿ ಹೊಂದಿರುವಂಥದ್ದಾಗಿದ್ದು ಎಂಥದ್ದೇ ಮತ್ತು ಯಾವುದೇ ರೀತಿಯ ಅಡ್ಡಿ ಆತಂಕಗಳು ಎದುರಾದರೂ ಅವುಗಳನ್ನು ಪಕ್ಕಕ್ಕೆ ಸರಿಸಿ ತಾವು ಸತ್ಯ, ನ್ಯಾಯ ಮತ್ತು ಮಹಿಳೆಯ ಪರವಾಗಿ ನಡೆದುಕೊಳ್ಳುವುದಾಗಿ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.

ಸಿಂಧನೂರಿಗೆ ತೆರಳುವ ಮಾರ್ಗಮಧ್ಯೆ ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ, ತಮಗೆ ಮುಖ್ಯಮಂತ್ರಿ ಅವಕಾಶ ನೀಡಿದ್ದಾರೆ. ತಾವು ಸೈದ್ಧಾಂತಿಕವಾಗಿ ಒಂದು ಪಕ್ಷದ ನೆಲೆಯಿಂದ ಬಂದವರಾದರೂ ಆಯೋಗದ ಕಾರ್ಯಚಟುವಟಿಕೆಗಳಲ್ಲಿ ಪಕ್ಷ ಗೌಣವಾಗುತ್ತದೆ. ಅಲ್ಲದೆ ಇಲ್ಲಿಯವರೆಗೂ ಆಯೋಗದ ಕೆಲಸಕಾರ್ಯಗಳು, ಚಟುವಟಿಕೆಗಳಿಗೆ ಸರ್ಕಾರ ಅಥವಾ ಬೇರೆ ಯಾರಿಂದಲೂ ಅಡ್ಡಿ ಎದುರಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಮಹಿಳಾ ಆಯೋಗದ ಶಿಫಾರಸುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ, ಮುಖ್ಯ ಕಾರ್ಯದರ್ಶಿ ಮಹಿಳೆಯೇ ಆಗಿರುವುದರಿಂದ ಅವರೂ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಆಯೋಗದ ಶಿಫಾರಸುಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಇಲ್ಲಿಯವರೆಗೆ ಆಯೋಗ ನೀಡಿರುವ ಶೇ. 75ರಷ್ಟು ಶಿಫಾರಸ್ಸುಗಳಿಗೆ ಸರ್ಕಾರ ಸ್ಪಂದಿಸಿದೆ. ಉಳಿದ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಲು ಆಡಳಿತಾತ್ಮಕವಾಗಿ ಸಾಧ್ಯವಾಗದಿರುವ ಕುರಿತು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದೆ ಎಂದು ಶ್ಲಾಘಿಸಿದರು.

ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಜನವಸತಿ, ಶಾಲೆ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದರಿಂದ ಸುಲಭವಾಗಿ ಕೈಗೆಟುಕುತ್ತಿದ್ದು ಮಕ್ಕಳು ಸಹ ವ್ಯಸನಿಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ವ್ಯಸನಿ ಗಂಡಂದಿರಿಂದ ಆಗುತ್ತಿರುವ ಹಿಂಸೆ, ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಹಿಳೆಯರೇ ಹೋದಲ್ಲೆಲ್ಲ ತಮ್ಮ ಬಳಿ ಗೋಳು ತೋಡಿಕೊಳ್ಳುತ್ತಿದ್ದಾರೆ. ಇಂಥ ಅಕ್ರಮಕ್ಕೆ ಸರ್ಕಾರವೇ ಕಡಿವಾಣ ಹಾಕಬೇಕು, ಜನಹಿತವನ್ನು ಗಮನದಲ್ಲಿರಿಸಿಕೊಂಡು ಪರವಾನಗಿ ನೀಡುವ ವಿಷಯದಲ್ಲಿ ಸರ್ಕಾರ ಗಂಭೀರವಾಗಿ ಯೋಚಿಸಬೇಕು ಮತ್ತು ಅಕ್ರಮ ನಿಯಂತ್ರಣದಲ್ಲಿ ರಾಜಿ ಆಗಲೇ ಬಾರದು. ಈ ಕುರಿತು ಸರ್ಕಾರಕ್ಕೆ ಅನೇಕ ಬಾರಿ ಪತ್ರ ಬರೆಯಲಾಗಿದೆ.

ಅದೇ ರೀತಿ ಪಂಚಾಯಿತಿಗಳು, ಸ್ಥಳೀಯ ಸಂಸ್ಥೆಗಳು, ತಮ್ಮ ಮಹಿಳೆಯರು, ಕುಟುಂಬ ನಿರಾಳವಾಗಿರಬೇಕಾದರೆ ಊರಿನ ಜನರೇ ಅಕ್ರಮವನ್ನು ನಿಯಂತ್ರಿಸಲು ಸಾಧ್ಯವಿದೆ. ಅಕ್ರಮ ಮದ್ಯದ ವಿರುದ್ಧದ ಹೋರಾಟದಲ್ಲಿ ಮಹಿಳೆಯರಿಂದಲೇ ಕ್ರಾಂತಿಕಾರಿ ಹೋರಾಟ ನಡೆಯುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಒಂದು ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಇಳಿಮುಖವಾಗಿರುವುದು ಸಮಾಧಾನಕರ ಸಂಗತಿಯಾಗಿದೆ ಎಂದರು.

ನಾಲ್ಕು ತಿಂಗಳು ಕಳೆದರೂ ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಅವಕಾಶ ಕಲ್ಪಿಸದಿರುವುದನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ತಾವು ತೀವ್ರವಾಗಿ ಖಂಡಿಸುವುದಾಗಿ ಹೇಳಿದ ನಾಗಲಕ್ಷ್ಮಿ ಚೌಧರಿ, ನಮ್ಮದ ಬಸವಣ್ಣನ ನಾಡು, ಮಹಿಳೆಯರಿಗೆ ಸಮಾನ ಅವಕಾಶ ನೀಡುವುದು ಕೇವಲ ಬಾಯಿ ಮಾತಿಗೆ ಸೀಮಿತವಾಗದೆ ಅನುಭವ ಮಂಟಪದ ಪರಿಕಲ್ಪನೆಯಲ್ಲಿ ಆಡಳಿತ ವ್ಯವಸ್ಥೆ ಮುನ್ನಡೆಯಬೇಕು. ಏನೆಲ್ಲ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅರಿಯಬೇಕಾದರೆ ಮಹಿಳೆಗೆ ಅವಕಾಶ ಕೊಟ್ಟು ನೋಡಬೇಕು. ರಾಜೀವಗಾಂಧಿ ಅವರು ಕಾನೂನು ರೂಪಿಸದಿದ್ದರೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಈಗಿರುವಷ್ಟೂ ಸ್ಥಾನಗಳನ್ನು ಯಾರೂ ಕೊಡುತ್ತಿರಲಿಲ್ಲ. ಭವಿಷ್ಯದಲ್ಲಿ ಈ ವಿಷಯದಲ್ಲಿ ಬದಲಾವಣೆಗಳಾಗುವ ಆಶಯ ಇದೆ ಎಂದರು.