ಬಿಗ್ ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ ತಾಂಡವ್ ರಾಮ್ ನಿರ್ಗಮನವು ವೀಕ್ಷಕರಲ್ಲಿ ತೀವ್ರ ಬೇಸರ ಮೂಡಿಸಿತ್ತು. ಮನೆಯಲ್ಲಿದ್ದಷ್ಟು ದಿನ ಸೈಲೆಂಟ್ ಆಗಿದ್ದರೂ, ತಮ್ಮದೇ ಶೈಲಿಯಲ್ಲಿ ಸದ್ದು ಮಾಡುತ್ತಿದ್ದ ತಾಂಡವ್ ಉಪಸ್ಥಿತಿ ‘ಟೈಮ್ ಪೀಸ್’ ಇದ್ದಂತೆ. ಗಡಿಯಾರ ನಿಂತ ಮೇಲೆಯೇ ಅದರ ಬೆಲೆ ತಿಳಿಯುವಂತೆ, ತಾಂಡವ್ ಹೊರಬಂದ ಮೇಲೆಯೇ ದೊಡ್ಮನೆಯಲ್ಲಿ ಅವರ ಸ್ಥಾನದ ಅರಿವು ವೀಕ್ಷಕರಿಗೆ ಹಾಗೂ ಮನೆಯ ಸದಸ್ಯರಿಗೆ ಆಗಿದ್ದು ಸುಳ್ಳಲ್ಲ.
ಈ ಮಧ್ಯೆ, ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ನೀಡಿದ್ದ ಸುಳಿವು ವೀಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತ್ತು. “ನಿಂತುಹೋಗಿರುವ ಗಡಿಯಾರಕ್ಕೆ ಮತ್ತೆ ಜೀವ ಬರುತ್ತಾ? ಅಥವಾ ಅದನ್ನು ಗೋಡೆಯಿಂದ ಶಾಶ್ವತವಾಗಿ ತೆಗೆದುಹಾಕುವ ಸಮಯ ಬಂತಾ?” ಎಂದು ಸುದೀಪ್ ಕೇಳಿದ್ದ ಪ್ರಶ್ನೆಗೆ ಈಗ ತೆರೆಬಿದ್ದಿದೆ. ತಾಂಡವ್ ನಿರ್ಗಮನ ಸಂಪೂರ್ಣವಾಗಿ ಅಂತ್ಯಗೊಂಡಿಲ್ಲ ಎಂಬ ವೀಕ್ಷಕರ ಊಹೆ ಈಗ ನಿಜವಾಗಿದೆ.
ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ಈ ಕುತೂಹಲಕ್ಕೆ ಅಂತಿಮ ತೆರೆ ಎಳೆದಿದೆ. ತಾಂಡವ್ ರಾಮ್ ಮತ್ತೆ ಬಿಗ್ ಬಾಸ್ ಮನೆಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಜರ್ನಿ ಇನ್ನೂ ಮುಗಿದಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಅವರು, ದೊಡ್ಮನೆಯಲ್ಲಿ ಮತ್ತೆ ಹೊಸ ಆಟ ಶುರು ಮಾಡಿದ್ದಾರೆ. ತಾಂಡವ್ ಈ ರೀ-ಎಂಟ್ರಿ ಬಿಗ್ ಬಾಸ್ ಮನೆಯ ಆಟದ ದಿಕ್ಕನ್ನೇ ಬದಲಿಸುವ ಮುನ್ಸೂಚನೆ ನೀಡಿದೆ.





















