ಕೊಪ್ಪಳ: ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಮತ್ತು ಕಬ್ಬು ಬೆಲೆಯನ್ನು ಪ್ರತಿ ಟನ್‌ಗೆ 5,500 ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ರೈತರು ತಾಲ್ಲೂಕಿನ ಹಿಟ್ನಾಳ ಟೋಲ್ ಗೇಟ್ ಬಳಿ ಮಂಗಳವಾರ ಹೆದ್ದಾರಿ ತಡೆದು, ಪ್ರತಿಭಟನೆ ನಡೆದಿದ್ದು, ಈ ವೇಳೆ ಇಬ್ಬರು ರೈತ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಹೋರಾಟಗಾರರು ಕಿವಿಗೆ ಹೂ ಮುಡಿದು, ರೈತ ಮಹಿಳೆಯರು ತಲೆಯ ಮೇಲೆ ಕಲ್ಲು ಹೊತ್ತು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕಮಲಾಪುರ ಗ್ರಾಮದ ಲಕ್ಷ್ಮಿ ಮತ್ತು ರತ್ನಮ್ಮ ಎಂಬ ರೈತ ಮಹಿಳೆಯರು ಹೆದ್ದಾರಿ ಪಕ್ಕದ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಳ್ಳಲು ಯತ್ನಿಸಿದರು. ಆಗ ಸ್ಥಳದಲ್ಲಿದ್ದ ಪೊಲೀಸರು ತಡೆಯೊಡ್ಡಿದರು.
ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳಗೆ ಬೇಡಿಕೆ ಈಡೇರಿಕೆಗಾಗಿ ರೈತ ಮುಖಂಡರು ಮನವಿ ಸಲ್ಲಿಸುತ್ತಿದ್ದರು. ಇನ್ನೊಂದೆಡೆ ರೈತ ಮಹಿಳೆಯರು ಸರ್ಕಾರದ ನಡೆಯಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಇದನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು.
ನಂತರ ರೈತ ಮಹಿಳೆಯೊಬ್ಬರು ಮೂರ್ಛೆ ಹೋಗಿದ್ದು, ಈ ರೈತ ಮಹಿಳೆಯನ್ನು ಪೊಲೀಸ್ ವಾಹನದಲ್ಲಿ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಕೊಡಿಸಿದರು. ಕೆಲ ಹೆದ್ದಾರಿ ತಡೆದಿದ್ದು, ಇದರಿಂದಾಗಿ ಟೋಲ್ ಗೇಟ್ ಬಳಿ ನೂರಾರು ವಾಹನಗಳು ನಿಂತಿದ್ದು, ಸಂಚಾರ ದಟ್ಟಣೆ ಉಂಟಾಯಿತು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಮುಂದಾಗಿದ್ದರು. ಸಂಘದ ಜಿಲ್ಲಾಧ್ಯಕ್ಷ ಸುಖಮುನಿಯಪ್ಪ ಸೇರಿ ವಿವಿಧ ಮುಖಂಡರು ಇದ್ದರು.






















