ಅಫಜಲಪುರ (ಕಲಬುರಗಿ): 16 ವರ್ಷದ ಅಪ್ರಾಪ್ತ ಬಾಲಕಿಯ ಅಪಹರಣ ಹಾಗೂ ಫೋಕ್ಸೊ (POCSO) ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಆರೋಪಿಯೊಬ್ಬ ಅಫಜಲಪುರ ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಪೊಲೀಸ್ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಆರೋಪಿಯ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಮಂಜುನಾಥ ಎಂಬಾತನ ವಿರುದ್ಧ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಆತ ತಲೆಮರೆಸಿಕೊಂಡಿದ್ದು, ಪೊಲೀಸರು ಹಲವು ದಿನಗಳಿಂದ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಇದನ್ನೂ ಓದಿ: ರಾಜ್ಯದ 8 ಜಿಲ್ಲೆಗಳಲ್ಲಿ ಹೊಸ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ
ಪುಣೆಯಲ್ಲಿ ಬಂಧಿಸಿ ಅಫಜಲಪುರಕ್ಕೆ ಕರೆತಂದ ಪೊಲೀಸರು : ತನಿಖೆ ವೇಳೆ ಆರೋಪಿ ಮಹಾರಾಷ್ಟ್ರದ ಪುಣೆ ನಗರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಫಜಲಪುರ ಪೊಲೀಸರು ಅಲ್ಲಿಗೆ ತೆರಳಿ ಮಂಜುನಾಥನನ್ನು ವಶಕ್ಕೆ ಪಡೆದಿದ್ದರು. ಬಳಿಕ ಕಾನೂನು ಪ್ರಕ್ರಿಯೆಗಾಗಿ ಆತನನ್ನು ಅಫಜಲಪುರ ಪೊಲೀಸ್ ಠಾಣೆಗೆ ಕರೆತರಲಾಯಿತು.
ಠಾಣೆಯಲ್ಲೇ ಪೊಲೀಸರಿಗೆ ಚಳ್ಳೆಹಣ್ಣು : ಪೊಲೀಸ್ ಠಾಣೆಯಲ್ಲಿ ಕಾನೂನು ಸಂಬಂಧಿತ ಪ್ರಕ್ರಿಯೆಗಳು ನಡೆಯುತ್ತಿರುವ ವೇಳೆ, ಭದ್ರತಾ ಲೋಪವನ್ನು ಸದುಪಯೋಗಪಡಿಸಿಕೊಂಡ ಆರೋಪಿ ಅಲ್ಲಿಂದಲೇ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಠಾಣೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಇದನ್ನೂ ಓದಿ: ಬಾಗಲಕೋಟೆಯ BTDA ಕಚೇರಿಯಲ್ಲಿ ಲೋಕಾಯುಕ್ತ ದಾಳಿ
ವಿಶೇಷ ತಂಡಗಳಿಂದ ತೀವ್ರ ಶೋಧ : ಆರೋಪಿ ಪರಾರಿಯಾದ ಕೂಡಲೇ ಪೊಲೀಸರು ವಿವಿಧ ದಿಕ್ಕುಗಳಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆರೋಪಿಯನ್ನು ಶೀಘ್ರ ಬಂಧಿಸಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಕಲಬುರಗಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ನಾಕಾಬಂದಿ ನಡೆಸಿ ವಾಹನಗಳ ತಪಾಸಣೆ ಕೈಗೊಳ್ಳಲಾಗಿದೆ.
ಪ್ರಕರಣ ಸಂಬಂಧ ಅಫಜಲಪುರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಆರೋಪಿ ಮರುಬಂಧನಕ್ಕಾಗಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.






















