ಬಾಗಲಕೋಟೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 35ರಿಂದ 40 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆ ಸುಟ್ಟು ಭಸ್ಮವಾಗಿರುವ ಘಟನೆ ಕುಳಗೇರಿ ಕ್ರಾಸ್ನ ಬೆಳವಲಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ 11ಕ್ಕೂ ಹೆಚ್ಚು ರೈತರಿಗೆ ಸೇರಿದ ಕಬ್ಬು ಬೆಳೆ ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಬೆಳವಲಕೊಪ್ಪ ಗ್ರಾಮದ ಯಲ್ಲವ್ವ ಅಡಿವೆಪ್ಪ ಚಿಕ್ಕಲಗೊಣ್ಣವರ, ಫಕ್ಕೀರಪ್ಪ ಹನಮಪ್ಪ ತಳವಾರ, ಅಶೋಕ ಸಂಗಪ್ಪ ಅಬ್ಬಿಗೇರಿ, ಚನ್ನಪ್ಪ ನಾಗಪ್ಪ ಅಬ್ಬಿಗೇರಿ, ಹನಮಂತ ಜಿನಗಪ್ಪ ಪೂಜಾರ, ಹನಮಂತ ನಿಂಗಪ್ಪ ಪೂಜಾರ, ಸುಭಾಸ ನಾಗಪ್ಪ ಭಾವಿ, ನಾಗರಾಜ ಭೀಮಪ್ಪ ಭಾವಿ, ನಾಗರಾಜ ಸುಭಾಸ ಭಾವಿ, ಲಕ್ಷ್ಮೀಬಾಯಿ ಬಸವರಾಜ ಭಾವಿ ಸೇರಿದಂತೆ ಹಲವು ರೈತರಿಗೆ ಸೇರಿದ ಕಬ್ಬು ಬೆಂಕಿಗೆ ಆಹುತಿಯಾಗಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ, ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬಹುತೇಕ ಕಬ್ಬು ಸುಟ್ಟು ಕರಕಲಾಗಿತ್ತು. ಕೇವಲ 20 ಗುಂಟೆ ಪ್ರದೇಶದಲ್ಲಿನ ಕಬ್ಬನ್ನು ಮಾತ್ರ ಉಳಿಸಲು ಸಾಧ್ಯವಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಹಾಗೂ ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಳೆಯ ವಿದ್ಯುತ್ ತಂತಿಗಳೇ ಅವಘಡಕ್ಕೆ ಕಾರಣ?: ರೈತರ ಜಮೀನುಗಳ ಮೇಲಿರುವ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ಜೋತುಬಿದ್ದಿವೆ. ಹಲವು ವರ್ಷಗಳಿಂದ ಈ ತಂತಿಗಳನ್ನು ಬದಲಿಸಿಲ್ಲ. ಪ್ರತಿ ವರ್ಷ ಬೆಳೆ ಬೆಳೆಯುವಾಗಲೂ ವಿದ್ಯುತ್ ತಂತಿಗಳಿಂದ ಬೆಂಕಿ ಅವಘಡ ಸಂಭವಿಸುವ ಆತಂಕದಲ್ಲೇ ಇರಬೇಕಾಗಿದೆ. ಈ ಬಗ್ಗೆ ಹಲವು ಬಾರಿ ಕೆಇಬಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಈ ಹಿಂದೆ ವಿದ್ಯುತ್ ತಂತಿಗಳಿಂದ ಕಬ್ಬು ಬೆಳೆ ಸುಟ್ಟುಹೋದ ಸಂದರ್ಭದಲ್ಲಿಯೂ ರೈತರಿಗೆ ಯಾವುದೇ ಪರಿಹಾರ ದೊರೆತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಬಾರಿ ಭಾರಿ ಪ್ರಮಾಣದ ಬೆಳೆ ನಷ್ಟವಾಗಿದೆ. ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವವರು ಯಾರು ಎಂದು ರೈತ ವಾಸುರಾಜ ಭಾವಿ ಪ್ರಶ್ನಿಸಿದ್ದು, ಸಂಬಂಧಿಸಿದ ಅಧಿಕಾರಿಗಳಿಂದಲೇ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮೂರು ವರ್ಷಗಳಿಂದ ಕಬ್ಬು ಬೆಂಕಿಗೆ ಆಹುತಿ: ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷ ವಿದ್ಯುತ್ ಅವಘಡದಿಂದ ತಮ್ಮ ಕಬ್ಬು ಬೆಳೆ ಸುಟ್ಟುಹೋಗುತ್ತಿದೆ. ಕಳೆದ ವರ್ಷ ಹೊಲದಲ್ಲೇ ಇದ್ದ ಕಾರಣ ಬೆಂಕಿ ಕಾಣಿಸಿಕೊಂಡ ತಕ್ಷಣ ಗಮನಕ್ಕೆ ಬಂದು ಕಡಿಮೆ ಪ್ರಮಾಣದಲ್ಲಿ ನಷ್ಟವಾಗಿತ್ತು. ಆದರೆ, ಈ ಬಾರಿ ಹೊಲದಲ್ಲಿ ಯಾರೂ ಇಲ್ಲದ ಕಾರಣ ತಮ್ಮ ಕಬ್ಬು ಸೇರಿದಂತೆ 10ಕ್ಕೂ ಹೆಚ್ಚು ರೈತರ ಸುಮಾರು 40 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಹೀಗಾದರೆ ರೈತರು ಬದುಕುವುದಾದರೂ ಹೇಗೆ ಎಂದು ರೈತ ಹನಮಪ್ಪ ಅಡಿವೆಪ್ಪ ಚಿಕ್ಕಲಗೊಣ್ಣವರ ಅಳಲು ತೋಡಿಕೊಂಡಿದ್ದಾರೆ.






















