ಬೆಂಗಳೂರು: ‘6-5=2’ ಹಾಗೂ ಸೂಪರ್ ಹಿಟ್ ‘ದಿಯಾ’ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಕೆ. ಎಸ್. ಅಶೋಕ ಇದೀಗ ತಮ್ಮ ಮುಂದಿನ ಮಹತ್ವಾಕಾಂಕ್ಷಿ ಸಿನಿಮಾವನ್ನು ಘೋಷಿಸಿದ್ದಾರೆ. ‘ಫ್ರೆಂಡ್ಸ್ & ಫ್ಯಾಮಿಲಿಸ್’ ಎಂಬ ಆಕರ್ಷಕ ಶೀರ್ಷಿಕೆಯ ಈ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಇಂದು ಅಧಿಕೃತವಾಗಿ ಅನಾವರಣಗೊಂಡಿದೆ. ವಿಶೇಷವೆಂದರೆ, ‘ದಿಯಾ’ ಚಿತ್ರದ ಯಶಸ್ವಿ ಜೋಡಿಯಾದ ಪೃಥ್ವಿ ಅಂಬಾರ್ ಮತ್ತು ದೀಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ಮತ್ತೆ ಒಂದಾಗಿದ್ದು, ಇವರೊಂದಿಗೆ ನವ ಪ್ರತಿಭೆ ನಿವೀನ್ (ಶ್ರೀಧರ್) ಮತ್ತು ಆಯಿಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಅಶೋಕ ಕೆ. ಎಸ್., “ಇದು ಮೂವರು ಗೆಳೆಯರು ಮತ್ತು ಅವರ ಕುಟುಂಬಗಳ ಸುತ್ತ ನಡೆಯುವ ಒಂದು ಹಾಸ್ಯಾತ್ಮಕ ಸೋಶಿಯಲ್ ಡ್ರಾಮಾ. ಪ್ರೇಕ್ಷಕರು ಸಿನಿಮಾ ನೋಡುವಾಗ ತಮ್ಮದೇ ಜೀವನದ ಘಟನೆಗಳನ್ನು ಕನ್ನಡಿಯಂತೆ ಕಾಣುವಷ್ಟು ಸಹಜವಾಗಿ ಪಾತ್ರಗಳನ್ನು ರೂಪಿಸಲಾಗಿದೆ” ಎಂದರು. ನಿರ್ದೇಶಕರೊಂದಿಗಿನ ಒಡನಾಟ ನೆನೆದ ನಟ ಪೃಥ್ವಿ ಅಂಬಾರ್, “ಅಶೋಕ್ ಸರ್ ನಿರ್ದೇಶನದಲ್ಲಿ ನಾನು ನಾಲ್ಕನೇ ಸಿನಿಮಾ ಮಾಡುತ್ತಿರುವುದು ನನ್ನ ಅದೃಷ್ಟ. ಕಷ್ಟ-ಸುಖದಲ್ಲಿ ಜೊತೆಗಿರುವ ಸ್ನೇಹಿತರು ಮತ್ತು ಕುಟುಂಬವೇ ನಿಜವಾದ ಆಸ್ತಿ ಎಂಬುದನ್ನು ಈ ಸಿನಿಮಾ ಸಾರುತ್ತದೆ” ಎಂದರು.
ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, “ಕುಂದಾಪುರದ ನಾನು ಮತ್ತು ಮಂಗಳೂರಿನ ಪೃಥ್ವಿ ಈ ಚಿತ್ರಕ್ಕಾಗಿ ನಾಲ್ಕು ತಿಂಗಳು ವರ್ಕ್ಶಾಪ್ ಮಾಡಿ, ಸಂಪೂರ್ಣ ಮಂಡ್ಯ ಶೈಲಿಯ ಭಾಷೆಯನ್ನು ಕಲಿತು ನಟಿಸಿದ್ದೇವೆ” ಎಂದು ಚಿತ್ರದ ವಿಶೇಷತೆ ಹಂಚಿಕೊಂಡರು. ನವೀನ್ ಎಸ್. ಪಿ. ನಿರ್ಮಾಣದ ಈ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಹೇಮಂತ್ ಕುಮಾರ್ ಛಾಯಾಗ್ರಹಣವಿದೆ.






















