SK Home Ad
Home ಸುದ್ದಿ ದೇಶ ಭಾರತವನ್ನು ವಿದೇಶದಲ್ಲಿ ಟೀಕಿಸಿದರೆ ಅಧಿಕಾರ ಸಿಗಲ್ಲ: ರಾಹುಲ್‌ಗೆ ಶಾ ಖಡಕ್ ಸಂದೇಶ

ಭಾರತವನ್ನು ವಿದೇಶದಲ್ಲಿ ಟೀಕಿಸಿದರೆ ಅಧಿಕಾರ ಸಿಗಲ್ಲ: ರಾಹುಲ್‌ಗೆ ಶಾ ಖಡಕ್ ಸಂದೇಶ

0
21

ಪುಣೆ: ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಟೀಕಿಸುವುದರಿಂದ ರಾಜಕೀಯವಾಗಿ ಯಾವುದೇ ಲಾಭವಾಗುವುದಿಲ್ಲ. ಅಧಿಕಾರದ ಗದ್ದುಗೆ ಏರಬೇಕೆಂಬ ಆಸೆ ಇದ್ದರೆ ವಿದೇಶ ಪ್ರವಾಸ ಮಾಡುವುದನ್ನು ಬಿಟ್ಟು ದೇಶದ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಅರಿಯಿರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ಪುಣೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಸತತ ಚುನಾವಣಾ ಸೋಲುಗಳಿಂದ ಹತಾಶರಾಗಿರುವ ರಾಹುಲ್ ಗಾಂಧಿ, ಭಾರತದ ಪ್ರಜಾಪ್ರಭುತ್ವದ ಬಗ್ಗೆ ವಿದೇಶಿ ವೇದಿಕೆಗಳಲ್ಲಿ ಮಾತನಾಡುವ ಮೂಲಕ ದೇಶದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹೈದರಾಬಾದ್‌ನಲ್ಲಿ ತೆಲಂಗಾಣ ಸರ್ಕಾರ ಆಯೋಜಿಸಿದ್ದ ‘ಭಾರತ ಶೃಂಗಸಭೆ’ಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ, ಅಲ್ಲಿ ದೇಶದ ವಿರುದ್ಧದ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಮಸಿ ಬಳಿಯಲು ಯತ್ನಿಸಿದ್ದಾರೆ ಎಂದು ಶಾ ದೂರಿದರು. ಇಂತಹ ನಡೆಗಳಿಗೆ ದೇಶದ ಜನರು ಚುನಾವಣೆಯ ಮೂಲಕವೇ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ ಆಂತರಿಕ ನಾಯಕತ್ವದ ಬಗ್ಗೆಯೂ ಅಮಿತ್ ಶಾ ಪ್ರಶ್ನೆ ಎತ್ತಿದರು. ನಿರಂತರ ಚುನಾವಣಾ ಸೋಲುಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರನ್ನು ಪ್ರಶ್ನಿಸಬೇಕು. ಇದೇ ರಾಜಕೀಯ ಧೋರಣೆಯನ್ನು ಮುಂದುವರಿಸಿದರೆ ಕಾಂಗ್ರೆಸ್ ಮುಂದಿನ 30 ವರ್ಷಗಳವರೆಗೂ ಅಧಿಕಾರದಿಂದ ದೂರ ಉಳಿಯುವ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತವನ್ನು ಸಮರ್ಥಿಸಿಕೊಂಡ ಅಮಿತ್ ಶಾ, ಕಳೆದ 12 ವರ್ಷಗಳಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲಾಗಿದೆ. ಪ್ರಧಾನಿ ಮೋದಿ ವಿರುದ್ಧ ಭ್ರಷ್ಟಾಚಾರದ ಯಾವುದೇ ಆರೋಪ ಕೇಳಿಬಂದಿಲ್ಲ ಎಂದು ಪ್ರತಿಪಾದಿಸಿದರು.