SK Home Ad
Home ನಮ್ಮ ಜಿಲ್ಲೆ ಕಲಬುರಗಿ ಮಳೆ ಕೊರತೆ: 504 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಕೆ

ಮಳೆ ಕೊರತೆ: 504 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಕೆ

0
42

ಕಲಬುರಗಿ: ತೀವ್ರ ಮಳೆ ಕೊರತೆಯಿಂದ ಜಿಲ್ಲೆಯ 11 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಅದರಂತೆ ಮಳೆಯಿಲ್ಲದೆ ಹಾಳಾದ 5.62 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ 504.35 ಕೋಟಿ ರೂ. ಪರಿಹಾರಕ್ಕೆ ಕಲಬುರಗಿ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಸಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಭಾನುವಾರ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಶೇ. 51 ಮತ್ತು ಹಿಂಗಾರು ಹಂಗಾಮಿನಲ್ಲಿ ಇದೂವರೆಗೆ ಶೇ. 96ರಷ್ಟು ಮಳೆ‌ ಕೊರತೆಯಿಂದ ತೊಗರಿ, ಹೆಸರು, ಉದ್ದು, ಹತ್ತಿ, ಕಬ್ಬು ಹಾಗೂ ಇತರೆ ಬೆಳೆಗಳಿಗೆ ಪರಿಹಾರ ನೀಡಲು ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಡಳಿತದಿಂದ ವರದಿ ಸಲ್ಲಿಸಲಾಗಿದೆ‌ ಎಂದರು.

2026-27ನೇ ಸಾಲಿಗೆ ಜಿಲ್ಲೆಯ 4,53,346 ರೈತರು 5,36,688.55 ಹೆಕ್ಟೇರ್ ಪ್ರದೇಶಕ್ಕೆ ಬೆಳೆ‌ ವಿಮೆ ಯೋಜನೆಯಡಿ ನೋಂದಣಿ ಮಾಡಿಸಿದ್ದು, ರಾಜ್ಯದಲ್ಲಿಯೆ ಕಲಬುರಗಿ ಜಿಲ್ಲೆ ಬೆಳೆ ವಿಮೆ ನೋಂದಣಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಪ್ರಸ್ತುತ ಬರಗಾಲವಿರುವ ಕಾರಣ ಬೆಳೆ ವಿಮೆ ಯೋಜನೆಯಡಿ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ಹಾಗೂ ಸೋಯಾಬೀನ್ ಬೆಳೆಗಳು ಹಸಳಸದ ಕಾರಣ 37,023 ರೈತರ 27,834.24 ಹೆಕ್ಟೇರ್ ಪ್ರದೇಶಕ್ಕೆ 16.50 ಕೋಟಿ ರೂ. ಬೆಳೆ ವಿಮೆ ಮಧ್ಯಂತರ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ

ಅದೇ ರೀತಿಯಾಗಿ ತೊಗರಿ, ಹತ್ತಿ, ಹಾಗೂ ಇನ್ನಿತರೆ ಬೆಳೆಗಳಿಗೆ ಬೆಳೆ ವಿಮೆ ಮಧ್ಯಂತರ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೆ ಡಿ.ಎಲ್.ಐ.ಸಿ ಸಭೆ ನಡೆದಿದ್ದು, ಬೆಳೆ ಹಾನಿಯ ಗ್ರೌಂಡ್ ಟ್ರುಥ್ಥಿಂಗ್ ಕಾರ್ಯ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ ಬೆಳೆ‌ ವಿಮೆನಡಿ ಜಿಲ್ಲೆಗೆ 250 ಕೋಟಿ ರೂ. ಪರಿಹಾರ ಸಿಗಬಹುದು ಎಂದು ಅಂದಾಜಿಸಲಾಗಿದೆ ಎಂದರು.

ಕಳೆದ 2025-26ನೇ ಸಾಲಿನಲ್ಲಿ ಕೃಷಿ, ಕಂದಾಯ ಇಲಾಖೆಯ ಶ್ರಮದ ಫಲವಾಗಿ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯ ಒಟ್ಟು 2,88,123 ರೈತರಿಗೆ 585.72 ಕೋಟಿ ರೂ. ಬೆಳೆ ವಿಮೆ ಪರಿಹಾರ ಮತ್ತು ಅಧಿಕ ಮಳೆಯಿಂದ ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್ ಹಾಗೂ ಸ್ಟೇಟ್ ಟಾಪ್ ಅಪ್ ನಡಿ 3,26,183 ರೈತರಿಗೆ 498.73 ಕೋಟಿ ರೂ. ಬೆಳೆ ಹಾನಿ ಪರಿಹಾರ ಸೇರಿದಂತೆ ಒಟ್ಟಾರೆಯಾಗಿ ಕಳೆದ ವರ್ಷದಲ್ಲಿ 1,084.45 ಕೋಟಿ ರೂ. ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರ ರೈತರಿಗೆ ವಿತರಿಸಲಾಗಿದೆ ಎಂದರು.

ಭೀಮಾ ನದಿಗೆ ನೀರು ಬಿಡಲು ಮನವಿ: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಜಲಮೂಲಗಳು ಬತ್ತಿಹೋಗಿದ್ದು, ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಸಮಸ್ಯೆ ಎದುರಾಗುತ್ತಿದೆ. ಮಹಾರಾಷ್ಟ್ರದಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮಹಾರಾಷ್ಟ್ರಕ್ಕೆ ಮನವಿ ಮಾಡಲಾಗಿದೆ. ನೀರು ಬಿಡುವುದಾಗಿ ಅಲ್ಲಿನ ಸರ್ಕಾರ ಭರವಸೆ ನೀಡಿದ್ದು, ಕಾದು ನೋಡಬೇಕಿದೆ ಎಂದರು.

ಇನ್ನು‌ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರತಿ ತಾಲೂಕಿಗೆ 1 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರಸ್ತುತವಿರುವ ಕೊಳವೆ ಬಾವಿಗೆ ಫ್ಲಶ್, ದುರಸ್ತಿ ಮಾಡಲು ಅದು ಸಾಧ್ಯವಾಗದಿದ್ದಲ್ಲಿ ಹೊಸದಾಗಿ ಬೋರವೆಲ್ ಕೊರೆಯಲು ತಿಳಿಸಲಾಗಿದೆ. ಶಾಸಕರು ಟಾಸ್ಕ್ ಫೋರ್ಸ್ ಸಮಿತಿ ಕರೆದು ಕಾಮಗಾರಿ ಕೈಗೊಳ್ಳಲು ತೀರ್ಮಾನ ತೆಗದುಕೊಳ್ಳಬಹುದು ಎಂದು ಸಚಿವರು ತಿಳಿಸಿದರು.