ಸಂ.ಕ. ಸಮಾಚಾರ ಕಲಬುರಗಿ: ದ್ವೈತಸಿದ್ಧಾಂತ ಪ್ರತಿಪಾದಕರಾದ ಜಗದ್ಗುರು ಶ್ರೀ ಮಧ್ವಾಚಾರ್ಯರ 788ನೇ ಜಯಂತಿಯನ್ನು ಬುಧವಾರ ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ರಾಜ್ಯ ಸರ್ಕಾರದ ವತಿಯಿಂದ ಇದೇ ಮೊದಲ ಬಾರಿಗೆ ಜಯಂತಿ ಆಚರಿಸಲಾಯಿತು. ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆದ ಜಯಂತಿಯನ್ನು ಸಂಕ್ಷಿಪ್ತವಾಗಿ, ಸರಳವಾಗಿ ಆಚರಿಸಲಾಯಿತು.
ಬ್ರಾಹ್ಮಣ ಸಮಾಜದ ಹಿರಿಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ರಾಮಾಚಾರ್ಯ ನವಲಿ ಅವರು ಶ್ರೀ ಮಧ್ವಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರದ ಎನ್.ವಿ. ಪದವಿ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲರು, ಸಂಸ್ಕೃತ ವಿದ್ವಾಂಸರಾದ ಪಂ. ಡಾ. ಗುರುಮಧ್ವಾಚಾರ್ಯ ನವಲಿ ಅವರು ವಿಶೇಷ ಉಪನ್ಯಾಸ ನೀಡಿ, `ಆಚಾರ್ಯ ಮಧ್ವರು ನಮ್ಮ ಕನ್ನಡ ನೆಲದವರು, ಭಾರತೀಯ ಸನಾತನ ಧರ್ಮದಲ್ಲಿ ಭಕ್ತಿಪಂಥವನ್ನು ಪರಿಣಾಮಕಾರಿಯಾಗಿ ಬೆಳೆಸಿದ ಮಹನೀಯರು, ಕನ್ನಡ ನಾಡಿನ ಜ್ಞಾನಪರಂಪರೆಯನ್ನು ಶ್ರೀಮಂತಗೊಳಿಸಿದವರು. ರಾಜ್ಯ ಸರ್ಕಾರ ಅವರ ಜಯಂತಿ ಆಚರಣೆಗೆ ಮುಂದಾಗಿದ್ದು ಶ್ಲಾಘನೀಯ’ ಎಂದರು.
ಶ್ರೀ ಮಧ್ವಾಚಾರ್ಯರ ಮಹತ್ವದ ಕೊಡುಗೆಯೆಂದರೆ ದ್ವೈತವೇದಾಂತದ ಶಾಸ್ತ್ರೀಯ, ವ್ಯವಸ್ಥಿತ ನಿರೂಪಣೆ, ದ್ವೈತದ ಮೂಲಭೂತ ನಿಲುವು ಜೀವಾತ್ಮ ಮತ್ತು ಪರಮಾತ್ಮ ಒಂದೇ ಅಲ್ಲ, ಅವುಗಳ ಮಧ್ಯೆ ನೈಜವಾದ ಭಿನ್ನತೆ ಇದೆ ಎಂಬುದಾಗಿದೆ. ಪರಮಾತ್ಮನು ಸ್ವತಂತ್ರ ಸತ್ಯ, ಜೀವಾತ್ಮ ಮತ್ತು ಜಗತ್ತು ಪರಮಾತ್ಮನ ಮೇಲೆ ಅವಲಂಬಿತವಾದ ಸತ್ಯಗಳು ಎಂಬುದನ್ನು ಮಧ್ವಾಚಾರ್ಯರು ಪ್ರತಿಪಾದಿಸಿದರು ಎಂದರು.
ಆಚಾರ್ಯ ಮಧ್ವರ ದೃಷ್ಟಿಯಲ್ಲಿ ಶ್ರೀ ವಿಷ್ಣುವೇ ಸರ್ವೋತ್ತಮ ಪರಮಾತ್ಮ. ಅದನ್ನು ಅರಿತುಕೊಂಡು, ವಿಶ್ವಾಸವಿರಿಸಿ ಜ್ಞಾನ, ಭಕ್ತಿ, ವೈರಾಗ್ಯ, ಧರ್ಮಾಚರಣೆ ಮೂಲಕ ಆಧ್ಯಾತ್ಮಿಕ ಪ್ರಗತಿ, ಉನ್ನತಿ ಸಾಧಿಸಬೇಕೆಂದು ಪ್ರತಿಪಾದಿಸಿದ್ದಾರೆ, 37 ಅಪೂರ್ವ ಕೃತಿಗಳನ್ನು ರಚಿಸಿ ದ್ವೈತ ಸಿದ್ಧಾಂತಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದರು.
ಉತ್ತರಾದಿ ಮಠದ ಮಠಾಧಿಕಾರಿಗಳಾದ ಘಂಟಿ ರಾಮಾಚಾರ್ಯರು, ಬ್ರಾಹ್ಮಣ ಸಮಾಜದ ಪ್ರಮುಖರಾದ ಪ್ರಶಾಂತರಾವ ಕೋರಳ್ಳಿ ವಕೀಲರು, ರಾಘವೇಂದ್ರ ಕುಲಕರ್ಣಿ ಕೋಗನೂರ ವಕೀಲರು, ಸತ್ಯಾತ್ಮ ಸೇನೆಯ ಉಪಾಧ್ಯಕ್ಷ ವಿನೂತ ಕುಲಕರ್ಣಿ, ರಘೂತ್ತಮ ಘಂಟಿ, ಕಂದಾಯ ಇಲಾಖೆಯ ಶಿಷ್ಟಾಚಾರ ತಹಸೀಲ್ದಾರ್ ಗಂಗಾಧರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಗೌರಮ್ಮ ಮತ್ತಿತರರು ಉಪಸ್ಥಿತರಿದ್ದರು.
ಖ್ಯಾತ ಗಾಯಕ ಅನಂತ ಮೇಸ್ತ್ರಿ ಮತ್ತು ವಿದ್ಯಾಧೀಶ ಆದ್ಯ ಅವರು ಆಚಾರ್ಯ ಮಧ್ವರ ಕುರಿತಾದ ಗೀತೆಗಳನ್ನು ಹಾಡಿದರು. ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಿದ್ವಾಂಸರಾದ ಪಂ. ಗೋಪಾಲಾಚಾರ್ಯ ಅಕಮಂಚಿ ನಿರೂಪಿಸಿ ವಂದಿಸಿದರು.

ಭವ್ಯ ಶೋಭಾಯಾತ್ರೆ : ವೇದಿಕೆ ಕಾರ್ಯಕ್ರಮದ ಮೊದಲು ಜಗತ್ ವೃತ್ತದಿಂದ ಡಾ. ಎಸ್.ಎಂ. ಪಂಡಿತ್ ರಂಗಮoದಿರದವರೆಗೆ ಶ್ರೀ ಮಧ್ವಾಚಾರ್ಯರ ಭಾವಚಿತ್ರದ ಭವ್ಯ ಶೋಭಾಯಾತ್ರೆ ಜರುಗಿತು.
ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಮಾಜಿ ಮೇಯರ್ ಶರಣು ಮೋದಿ, ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ ಅವರು ಚಾಲನೆ ನೀಡಿದರು. ವಿವಿಧ ಮಹಿಳಾ ಭಜನಾ ಮಂಡಳಿಯವರು ಹರಿನಾಮ ಭಜನೆ ಮಾಡಿದರು.
ಹಿರಿಯ ವಿದ್ವಾಂಸರಾದ ಪಂ. ಗೋಪಾಲಾಚಾರ್ಯ ಅಕಮಂಚಿ, ಪಂ. ಡಾ. ಹಣಮಂತಾಚಾರ್ಯ ಸರಡಗಿ, ಪಂ. ಡಾ. ಗುರುಮಧ್ವಾಚಾರ್ಯ ನವಲಿ, ಪಂ. ಪ್ರಸನ್ನಾಚಾರ್ಯ ಜೋಶಿ, ಪಂ. ಡಾ. ಶ್ರೀನಿವಾಸ ಆಚಾರ್ಯ ಪದಕಿ, ಪಂ. ನಾರಾಯಣಾಚಾರ್ಯ ಕಮಲಾಪುರ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಬ್ರಾಹ್ಮಣ ಸಮಾಜದ ಪ್ರಮುಖರಾದ ರಾಘವೇಂದ್ರ ನಾಡಗೌಡ ವಕೀಲರು, ಡಾ. ಗೌತಮ ಜಹಾಗೀರದಾರ್, ಡಿ.ಕೆ. ಕುಲಕರ್ಣಿ, ವ್ಯಾಸರಾಜ ಸಂತೆಕೆಲ್ಲೂರ, ಬೆಂಕಿ ಭೀಮಣ್ಣ ಮೋತಕಪಲ್ಲಿ, ರಂಗನಾಥ ದೇಸಾಯಿ, ಪ್ರಶಾಂತ ಕೊರಳ್ಳಿ, ರಾಘವೇಂದ್ರ ಕೊರಳ್ಳಿ, ಮುರಳೀಧರ ಜಿ. ಕರಲಗಿಕರ್, ಅವಿನಾಶ ಕುಲಕರ್ಣಿ ರೇವೂರ, ವಿನೂತ ಜೋಶಿ, ಡಾ. ಲಕ್ಷ್ಮೀಕಾಂತ ಮೊಹರೀರ್, ಪ್ರಮೋದ ದೇಶಪಾಂಡೆ ಆಡಕಿ, ಕೃಷ್ಣ ಮಳ್ಳಿ, ವಿನೋದ ಕುಲಕರ್ಣಿ ಸಾತಖೇಡ, ಸುಬ್ಬರಾವ ಸುಬೇದಾರ್, ಸುರೇಶ ಕುಲಕರ್ಣಿ ಯಾಳವಾರ, ವಿನಾಯಕ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು. ಬ್ರಾಹ್ಮಣ ಸಮಾಜದ ಹಿರಿಯರು, ನೂರಾರು ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.
- IPL 2027: ದೆಹಲಿ ಕ್ಯಾಪಿಟಲ್ಸ್ ಸ್ಪಿನ್ ಕೋಚ್ ಆಗಿ ಅಮಿತ್ ಮಿಶ್ರಾ ನೇಮಕ
- ಭಾರತದ ಐತಿಹಾಸಿಕ ಸೆಂಗೋಲ್ ಶಿಲ್ಪಿ ವುಮ್ಮಿಡಿ ಎಥಿರಾಜ್ ನಿಧನ
- ಯುನೆಸ್ಕೋ ತಾತ್ಕಾಲಿಕ ಪಟ್ಟಿಗೆ ಭಾರತದ ಮೂರು ತಾಣಗಳ ಸೇರ್ಪಡೆ
- ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಡಿ.ಕೆ. ಶಿವಕುಮಾರ್; ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ
- ಕಲಬುರಗಿಯಲ್ಲಿ ಶ್ರೀ ಮಧ್ವಾಚಾರ್ಯರ 788ನೇ ಜಯಂತಿ ಆಚರಣೆ; ಭವ್ಯ ಶೋಭಾಯಾತ್ರೆ





















