SK Home Ad
Home ನಮ್ಮ ಜಿಲ್ಲೆ ಹಾವೇರಿ ಚಿಲ್ಲರೆ ಹಣದ ವಾದದಲ್ಲಿ ವ್ಯಾಪಾರಿ ಸಾವು: ಮೂವರು ಪೊಲೀಸ್ ವಶಕ್ಕೆ

ಚಿಲ್ಲರೆ ಹಣದ ವಾದದಲ್ಲಿ ವ್ಯಾಪಾರಿ ಸಾವು: ಮೂವರು ಪೊಲೀಸ್ ವಶಕ್ಕೆ

0
336

ರಟ್ಟೀಹಳ್ಳಿ (ಹಾವೇರಿ): ಚಿಲ್ಲರೆ ಹಣವನ್ನು ವಾಪಸ್ ನೀಡುವ ವಿಚಾರವಾಗಿ ನಡೆದ ಗಲಾಟೆ ವೇಳೆ ವ್ಯಾಪಾರಿಯೊಬ್ಬರು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮೃತರನ್ನು ಶಿವಾಜಪ್ಪ ಬೈರೋಜಿ (54) ಎಂದು ಗುರುತಿಸಲಾಗಿದೆ. ಅವರು ರಟ್ಟೀಹಳ್ಳಿಯಲ್ಲಿ ಅಂಗಡಿ ನಡೆಸುತ್ತಿದ್ದು, ಬುಧವಾರ ರಾತ್ರಿ ಕೆಲ ಯುವಕರು ಅವರ ಅಂಗಡಿಗೆ ಬಂದು ಮೊಟ್ಟೆ ಖರೀದಿಸಿದ್ದಾರೆ. ಈ ವೇಳೆ ಚಿಲ್ಲರೆ ಹಣ ನೀಡುವ ವಿಚಾರದಲ್ಲಿ ವಾಗ್ವಾದ ಉಂಟಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರು: ಕಲ್ಲು ಕ್ವಾರಿ ದುರಂತ – ಬಂಡೆ ಕುಸಿದು 7 ಕಾರ್ಮಿಕರ ಸಾವು

ಆ ಸಮಯದಲ್ಲಿ ಅಂಗಡಿಯಲ್ಲಿ ಶಿವಾಜಪ್ಪ ಅವರ ಪುತ್ರ ಇದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿರುವುದನ್ನು ಗಮನಿಸಿದ ಶಿವಾಜಪ್ಪ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ. ಈ ವೇಳೆ ಗಲಾಟೆಯಲ್ಲಿ ಭಾಗಿಯಾಗಿದ್ದ ಯುವಕರಲ್ಲಿ ಒಬ್ಬರು ಅಥವಾ ಕೆಲವರು ಅವರನ್ನು ಎದೆ ಭಾಗಕ್ಕೆ ತಳ್ಳಿದ ಪರಿಣಾಮ ಅವರು ನೆಲಕ್ಕೆ ಬಿದ್ದಿದ್ದಾರೆ. ಬಿದ್ದ ನಂತರ ಅವರು ಮೇಲೇಳದೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಘಟನೆಯ ಬಳಿಕ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಗುರುವಾರ ಬೆಳಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಐಜಿಪಿ ಡಾ. ರವಿಕಾಂತೇಗೌಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ವಾಟ್ಸಾಪ್ Username ವೈಶಿಷ್ಟ್ಯಕ್ಕೆ ಬ್ರೇಕ್ – Metaಗೆ ಕೇಂದ್ರ ನೋಟಿಸ್

ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಿಖರ ಕಾರಣ ಹಾಗೂ ಸಾವಿಗೆ ಕಾರಣವಾದ ಸಂದರ್ಭದ ಕುರಿತು ತನಿಖೆ ಮುಂದುವರಿದಿದೆ. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.