ಹಾಸನ: ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರ ಅಂತ್ಯಸಂಸ್ಕಾರ ಸೋಮವಾರ ಸರ್ಕಾರಿ ಗೌರವದೊಂದಿಗೆ ನಡೆಯಲಿದ್ದು, ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಹೋಬಳಿಯ ಕ್ಯಾತನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ಕುಟುಂಬದವರಿಂದ ಭರದ ಸಿದ್ಧತೆಗಳು ನಡೆಯುತ್ತಿವೆ.
ಕ್ಯಾತನಹಳ್ಳಿ ಸಮೀಪದ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ತಪ್ಪಲಿನಲ್ಲಿರುವ ಸ್ಥಳದಲ್ಲಿ ಚನ್ನಮ್ಮ ಅವರ ಅಂತಿಮ ವಿಧಿವಿಧಾನಗಳು ನೆರವೇರಲಿವೆ. ಅಂತ್ಯಸಂಸ್ಕಾರ ನಡೆಯುವ ಪ್ರದೇಶವನ್ನು ಜೆಸಿಬಿ ಯಂತ್ರಗಳ ಮೂಲಕ ಸ್ವಚ್ಛಗೊಳಿಸಿ ಸಮತಟ್ಟುಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, ಸಂಬಂಧಿಕರು, ಸ್ಥಳೀಯರು ಹಾಗೂ ಅಧಿಕಾರಿಗಳು ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅಂತಿಮ ನಮನ ಸಲ್ಲಿಸಲು ಸಾವಿರಾರು ಜನರು ಆಗಮಿಸುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ವಿಶಾಲ ಆಸನ ವ್ಯವಸ್ಥೆ, ಕುಡಿಯುವ ನೀರು, ನೆರಳು ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಮತ್ತು ಗಣ್ಯರು ಯಾವುದೇ ತೊಂದರೆಯಿಲ್ಲದೆ ಭಾಗವಹಿಸಲು ವಿಶೇಷ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿದೆ.
ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ವಾಹನಗಳ ಸುಗಮ ಸಂಚಾರ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಜನಸಂದಣಿ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ವಿಶೇಷ ಬಂದೋಬಸ್ತ್ ಕೈಗೊಂಡಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಎಲ್ಲ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದೆ. ಸ್ಥಳಕ್ಕೆ ಹಾಸನ ಸಂಸದ ಶ್ರೇಯಸ್ ಪಟೇಲ್ ಹಾಗೂ ಶಾಸಕ ಸಿ.ಎನ್. ಬಾಲಕೃಷ್ಣ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಿದ್ಧತೆಗಳನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
ಕ್ಯಾತನಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನೆಲೆಸಿದ್ದು, ಚನ್ನಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಲು ರಾಜ್ಯದ ವಿವಿಧ ಭಾಗಗಳಿಂದ ರಾಜಕೀಯ ಮುಖಂಡರು, ಸಾರ್ವಜನಿಕರು ಹಾಗೂ ಜೆಡಿಎಸ್ ಕಾರ್ಯಕರ್ತರು ಆಗಮಿಸುವ ನಿರೀಕ್ಷೆಯಿದೆ. ಅಂತಿಮ ವಿಧಿವಿಧಾನಗಳು ಗೌರವಯುತವಾಗಿ ಹಾಗೂ ಶಾಂತಿಯುತವಾಗಿ ನಡೆಯುವಂತೆ ಜಿಲ್ಲಾಡಳಿತ ಸಮಗ್ರ ಸಿದ್ಧತೆ ನಡೆಸಿದೆ.






















