SK Home Ad
Home ನಮ್ಮ ಜಿಲ್ಲೆ ಬೆಂಗಳೂರು ನಾಟಕದ ಮೂಲಕ ಸಮಾನತೆಯ ಸಂದೇಶ ಸಾರಿದ ‘ನನ್ನ ಅಂಬೇಡ್ಕರ್’

ನಾಟಕದ ಮೂಲಕ ಸಮಾನತೆಯ ಸಂದೇಶ ಸಾರಿದ ‘ನನ್ನ ಅಂಬೇಡ್ಕರ್’

0
143

ಬೆಂಗಳೂರು: ನಗರದ ಮಲ್ಲತಹಳ್ಳಿಯ ಕಲಾಗ್ರಾಮ ಸಮುಚ್ಚಯ ಭವನದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಮಾಸಿಕ ನಾಟಕ ಪ್ರದರ್ಶನ ಸರಣಿಯ ಅಂಗವಾಗಿ ಜುಲೈ 18ರಂದು ಬೆಳಗಾವಿಯ ಆಶಾದೀಪ ಸಮುದಾಯ ಕಲಾಕೇಂದ್ರದ ವತಿಯಿಂದ ಕೋಟಗಾನಹಳ್ಳಿ ರಾಮಯ್ಯ ಅವರ ‘ನನ್ನ ಅಂಬೇಡ್ಕರ್’ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಚಿಂತಕ ಹಾಗೂ ಹೋರಾಟಗಾರ ಮಾವಳ್ಳಿ ಶಂಕರ್ ಮಾತನಾಡಿ, “ನಮ್ಮನ್ನು ಉಳಿಸಬಲ್ಲ, ಕಾಪಾಡಬಲ್ಲ ಅತ್ಯಂತ ಶ್ರೇಷ್ಠವಾದ ಧರ್ಮಗ್ರಂಥ ಯಾವುದಾದರೂ ಇದ್ದರೆ ಅದು ಭಾರತದ ಸಂವಿಧಾನ” ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿ ಸಮಾಜಮುಖಿ ನಾಟಕಗಳ ಮೂಲಕ ಉತ್ತಮ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದು, ಅದರ ಕ್ರಿಯಾಶೀಲತೆಗೆ ಅಭಿನಂದನೆ ಸಲ್ಲಿಸಿದ ಅವರು, ‘ನನ್ನ ಅಂಬೇಡ್ಕರ್’ ನಾಟಕದ ನಿರ್ದೇಶಕ ಬಾಬಾಸಾಹೇಬ ಕಾಂಬಳೆ ಮತ್ತು ಅವರ ತಂಡ ರಾಜ್ಯದಾದ್ಯಂತ ಸಂಚರಿಸಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ನಾಟಕದ ಮೂಲಕ ಜನರಿಗೆ ತಲುಪಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಮ್ಮ ಚಳವಳಿ ವತಿಯಿಂದ ಬಾಬಾಸಾಹೇಬ ಕಾಂಬಳೆ ಹಾಗೂ ಅವರ ತಂಡಕ್ಕೆ ₹25 ಸಾವಿರ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿ ಶುಭ ಹಾರೈಸಿದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ಮಾತನಾಡಿ, ಅಕಾಡೆಮಿಯು ಪ್ರತಿ ತಿಂಗಳ ಮೂರನೇ ಶನಿವಾರ ನಾಟಕ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದು, ಈ ಬಾರಿ ‘ನನ್ನ ಅಂಬೇಡ್ಕರ್’ ನಾಟಕವನ್ನು ಪ್ರೇಕ್ಷಕರ ಮುಂದೆ ತರಲಾಗಿದೆ ಎಂದರು.

ನಾಟಕದ ರೂವಾರಿ, ಪರಿಕಲ್ಪನೆ ಹಾಗೂ ನಿರ್ದೇಶಕರಾದ ಬಾಬಾಸಾಹೇಬ ಕಾಂಬಳೆ ಅವರು ಕೇವಲ ರಂಗಕರ್ಮಿಯಲ್ಲ, ಅಂಬೇಡ್ಕರ್ ಅವರ ಕನಸುಗಳನ್ನು ಸಾಕಾರಗೊಳಿಸುವ ಧ್ಯೇಯದೊಂದಿಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡಿರುವ ವ್ಯಕ್ತಿ ಎಂದು ಶ್ಲಾಘಿಸಿದರು. ಅವರ ತಂಡ ಬೆಂಗಳೂರಿನ ಕಲಾಸಕ್ತರಿಗೆ ಅಂಬೇಡ್ಕರ್ ಅವರ ಜೀವನ ಮತ್ತು ಚಿಂತನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿ ಸಂಚಾಲಕ ಜಗದೀಶ ಜಾಲ, ಜಿಪಿಓ ಚಂದ್ರು, ರಿಜಿಸ್ಟ್ರಾರ್ ಬಿನಿಲಮ್ಮ ಸೇರಿದಂತೆ ಅಪಾರ ಸಂಖ್ಯೆಯ ಕಲಾಭಿಮಾನಿಗಳು ಹಾಗೂ ಪ್ರೇಕ್ಷಕರು ಉಪಸ್ಥಿತರಿದ್ದರು. ನಾಟಕ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು.