ಹುಬ್ಬಳ್ಳಿ: ಹವ್ಯಕರು ತಮ್ಮ ಮಕ್ಕಳಿಗೆ ಹವ್ಯಕ ಆಚಾರ, ವಿಚಾರ ತಿಳಿಸಬೇಕು. ಸಂಸ್ಕಾರ, ಧರ್ಮದ ಮಹತ್ವವನ್ನು ತಿಳಿಸಬೇಕು. ಈ ಮೂಲಕ ನಮ್ಮ ಸಮುದಾಯ ಬಾಂಧವರು ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಜಿಎಸ್‌ಟಿ ವಿಭಾಗದ ನಿವೃತ್ತ ಆಯುಕ್ತ ಶ್ರೀಕೃಷ್ಣ ಹೆಗಡೆ ಹೇಳಿದರು.
ಹುಬ್ಬಳ್ಳಿ-ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಹಮ್ಮಿಕೊಂಡಿದ್ದ ʻಹವ್ಯಕ ಹಬ್ಬʼ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಯುವಜನತೆ ಹಣದ ಬೆನ್ನತ್ತಿದ್ದಾರೆ. ಜ್ಞಾನವು ಹಣ ಗಳಿಕೆಗೆ ಮಾತ್ರ ಸೀಮಿತ ಆಗುತ್ತಿರುವುದು ಬೇಸರದ ಸಂಗತಿ. ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಜೀವನದಲ್ಲಿ ಕಷ್ಟಪಟ್ಟಾಗ ಮಾತ್ರ ಸಾಧನೆ ಸಾಧ್ಯ ಎಂದು ತಿಳಿಸಿದರು.
ಪುರಾಣ, ಮಹಾಕಾವ್ಯಗಳಲ್ಲಿ ಉಲ್ಲೇಖಿಸಿರುವ ಪ್ರಕಾರ ಬ್ರಾಹ್ಮಣ ಸಮುದಾಯ ಶ್ರೇಷ್ಠ ಸಮುದಾಯವಾಗಿದೆ. ದೇಶದಲ್ಲಿ ಹಿಂದುತ್ವ ಉಳಿದಿದ್ದರೆ ಅದಕ್ಕೆ ಬ್ರಾಹ್ಮಣರ ಕೊಡುಗೆ ಪ್ರಮುಖವಾಗಿದೆ. ಬ್ರಾಹ್ಮಣ ಸಮಾಜವನ್ನು ಟೀಕಿಸುವವರು ಹಲವರಿದ್ದರೂ, ಸಮಾಜದವರು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಹಣ ಸಂಪಾದನೆಯೇ ಜೀವನದ ಏಕೈಕ ಗುರಿಯಾಗಬಾರದು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಅವರು ಮಾತನಾಡಿ, ಹವ್ಯಕರು ಸಾಮರಸ್ಯಕ್ಕೆ ಹೆಸರಾಗಿದ್ದು, ಇತರ ಎಲ್ಲ ಸಮಾಜದವರೊಂದಿಗೆ ಬೆರೆತುಕೊಳ್ಳುವ ಗುಣ ಅವರಲ್ಲಿದೆ. ಹವ್ಯಕ ಸಮಾಜದ ಒಗ್ಗಟ್ಟು, ಶಿಸ್ತು, ಸಂಸ್ಕೃತಿ ಇತರ ಸಮುದಾಯಗಳಿಗೂ ಮಾದರಿ ಆಗಿದೆ ಎಂದರು.
ವ್ಯಕ್ತಿಗಿಂತ ಸಮಾಜ ದೊಡ್ಡದು. ಒಗ್ಗಟ್ಟಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಹವ್ಯಕ ಸಮಾಜವೇ ಸಾಕ್ಷಿ. ನಗರದಲ್ಲಿ ಕಳೆದ 44 ವರ್ಷಗಳಿಂದ ಹವ್ಯಕ ಹಬ್ಬದ ಹೆಸರಿನಲ್ಲಿ ಸಮಾಜದ ಸಂಘಟನೆಯ ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಅಧಿಕಾರವು ಒಂದು ಸಾಧನ ಇದ್ದಂತೆ. ಬಿಜೆಪಿ ಪಕ್ಷವು ಗುರುತಿಸಿ ಸ್ಥಾನಮಾನ ನೀಡಿದ್ದು, ಈ ಅವಕಾಶ ಬಳಸಿಕೊಂಡು ಜನರ ಏಳಿಗೆಗೆ ಪ್ರಾಮಾಣಿಕ ಸೇವೆ ಮಾಡುತ್ತೇನೆ. ಹವ್ಯಕರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಸಮಾಜದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ ಎಂದು ಭರವಸೆ ನೀಡಿದರು.
ಸಾಧಕರಾದ ಧಾರವಾಡ ಕೆಇ ಬೋರ್ಡ್ ನಿವೃತ್ತ ಪ್ರಾಂಶುಪಾಲ ಜಿ.ಆರ್. ಭಟ್ಟ, ನಿವೃತ್ತ ಉಪನ್ಯಾಸಕಿ ಪ್ರೇಮಾ ಹೆಗಡೆ, ರೈಲ್ವೆ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಕಾರ್ತಿಕ್ ಹೆಗಡೆಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಹೆಚ್ಚು ಫಲಿತಾಂಶ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
`ಗ್ಲಾನಿ’ ಕಾದಂಬರಿ ಬಿಡುಗಡೆ: ಹಿರಿಯ ಪತ್ರಕರ್ತ, ಸಾಹಿತಿ ಅರುಣಕುಮಾರ ಹಬ್ಬು ಅವರು ರಚಿಸಿದ ʻಗ್ಲಾನಿʼ ಕಾದಂಬರಿಯನ್ನು ಹುಳಗೋಳ ನಾಗಪತಿ ಹೆಗಡೆ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಕಾದಂಬರಿ ಕುರಿತು ಮಾತನಾಡಿದ ಅವರು ಒಂದೇ ಕುಟುಂಬದ ಎಲ್ಲರೂ ಸಾಹಿತಿಗಳೆಂಬ ದಾಖಲೆಗೆ ಒಳಗಾದ ಅರುಣಕುಮಾರ ಹಬ್ಬು ಅವರ ಗ್ಲಾನಿ ಕಾದಂಬರಿ 200 ಪುಟಗಳನ್ನು ಒಳಗೊಂಡಿದ್ದು, ಕಾದಂಬರಿ ಹಲವು ವಿಶೇಷತೆಗಳನ್ನು ಒಳಗೊಂಡಿದೆ ಎಂದರು.






















