ಹುಬ್ಬಳ್ಳಿ: ಮತಪಟ್ಟಿಯ `ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ಕುರಿತು ಯಾವುದೇ ಭಯ ಮತ್ತು ಆತಂಕ ಬೇಡ. ಇದೊಂದು ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು, ಯಾವ ಮತದಾರರೂ ತಮ್ಮ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಅನರ್ಹರನ್ನು ಹಾಗೂ ದೋಷಗಳನ್ನು ಕಂಡುಕೊಳ್ಳಲು ಮಾತ್ರ ನಡೆಯುತ್ತಿರುವ ಪ್ರಕ್ರಿಯೆ ಇದು.
ಎಸ್‌ಐಆರ್‌ನಿಂದ ಯಾವ ಅರ್ಹ ಮತದಾರರ ಹೆಸರೂ ಡಿಲೀಟ್ ಆಗುವುದಿಲ್ಲ. ಚುನಾವಣಾ ಆಯೋಗ ಯಾರ ಹೆಸರನ್ನೂ ಡಿಲೀಟ್ ಮಾಡುವುದಿಲ್ಲ. ಎಸ್‌ಐಆರ್ ವೇಳೆ ನೀಡಲಾಗುವ ಅರ್ಜಿ ನಮೂನೆಯನ್ನು (ಎನ್ಯೂಮರೇಷನ್ ಫಾರ್ಮ್) ಸಹಿ ಮಾಡಿ ಸಲ್ಲಿಸುವುದು ಮಾತ್ರ ಕಡ್ಡಾಯ. ಒಂದು ವೇಳೆ ಈ ಅರ್ಜಿಯನ್ನು ತುಂಬಿ ಸಹಿ ಮಾಡಿ ಮರಳಿಸಿದಿದ್ದರೆ ಹೆಸರು ಡಿಲೀಟ್ ಆಗಲಿದೆ…!
ಧಾರವಾಡ ಜಿಲ್ಲಾಧಿಕಾರಿಗಳೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಆರ್. ಸ್ನೇಹಲ್ ಜನತೆಗೆ ನೀಡಿರುವ ಅಭಯವಿದು. ಎಸ್‌ಐಆರ್ ಕುರಿತು `ಸಂಯುಕ್ತ ಕರ್ನಾಟಕ’ ಪತ್ರಿಕೆ ಮಂಗಳವಾರ ಏರ್ಪಡಿಸಿದ್ದ ಪೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಕ್ರಿಯೆ ಕುರಿತು ಜನರಿಗೆ ಇರುವ ಎಲ್ಲ ಅನುಮಾನಗಳನ್ನೂ ಪರಿಹರಿಸಿದರು.
`ಯಾವ ಆತಂಕವನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ಮನೆಗೆ ಬರುವ ಬಿಎಲ್‌ಓಗಳಿಗೆ (ಬೂತ್ ಮಟ್ಟದ ಮತಗಟ್ಟೆ ಅಧಿಕಾರಿಗಳು) ಅರ್ಜಿಗಳನ್ನು ತುಂಬಿ ಮರಳಿಸಿಸಬೇಕು. ಒಂದನ್ನು ಗಮನಿಸಿ. ನೀವೊಂದು ಕಡೆ ಈಗ ಹಾಲಿ ವಾಸವಿದ್ದು, ನಿಮ್ಮ ಮತ ಬೇರೊಂದು ಬೂತ್‌ನಲ್ಲಿ ಇದೆ ಎಂದಾದರೆ ಬಿಎಲ್‌ಓಗಳು ನಿಮ್ಮ ಮನೆಗೆ ಎನ್ಯೂಮರೇಷನ್ ಫಾರ್ಮ್ ಕೊಡುವುದಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಮತ ಎಲ್ಲಿದೆಯೋ ಅಲ್ಲಿನ ಬಿಎಲ್‌ಓಗಳನ್ನು ಸಂಪರ್ಕಿಸಿ ಅರ್ಜಿ ತುಂಬಿಕೊಡಿ.
`ನಿಮ್ಮ ಮತ ಇರುವ ಮತಗಟ್ಟೆಯ ಬಿಎಲ್‌ಓಗಳ ಮಾಹಿತಿ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅದನ್ನು ನೋಡಿಕೊಂಡು ಮುಂದುವರಿಯಿರಿ. ಇಂತಹ ಸಂದರ್ಭದಲ್ಲಿ ಜನಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೇ ಪ್ರತಿಯೊಂದು ಮತಗಟ್ಟೆಯಲ್ಲೂ ಮತದಾರರ ಸಹಾಯ ಕೇಂದ್ರಗಳನ್ನು (ಫೆಸಿಲಿಟೇಷನ್ ಸೆಂಟರ್) ತೆರೆಯಲಾಗಿದೆ. ಬೇರೊಂದು ಮತಗಟ್ಟೆಯಲ್ಲಿ ಹೆಸರಿದ್ದವರು ಈ ಕೇಂದ್ರಗಳನ್ನು ಸಂಪರ್ಕಿಸಿದರೆ ಸಹಾಯ ದೊರೆಯಲಿದೆ’ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಹಾಗೆಯೇ, ಒಂದು ವೇಳೆ ಬಿಎಲ್‌ಓಗಳು ಎಸ್‌ಐಆರ್‌ಗೆ ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೂ ಚಿಂತೆ ಇಲ್ಲ; ನಿಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಮತದಾರರ ಸಹಾಯ ಕೇಂದ್ರಕ್ಕೆ ಹೋಗಿ ಮಾಹಿತಿ ತುಂಬಿಕೊಡಿ. ನೀವು ಎಲ್ಲಿ ಬಂದು ಮಾಹಿತಿ ನೀಡಬೇಕು ಎಂಬ ವಿವರಗಳು ಮತ್ತು ಫೋನ್ ಸಂಖ್ಯೆಯನ್ನು ಬಿಎಲ್‌ಓಗಳು ನಿಮ್ಮ ಮನೆ ಬಾಗಿಲಿಗೆ ಅಂಟಿಸಿ ಹೋಗಿರುತ್ತಾರೆ ಎಂದು ಹೇಳಿದರು.
ಹಳೆಯ ಮತಪಟ್ಟಿ ದಾಖಲೆಗಳು ಅಥವಾ ಇನ್ಯಾವುದೇ ಕಾಗದಪತ್ರಗಳನ್ನು ಎಸ್‌ಐಆರ್ ವೇಳೆ ಸಲ್ಲಿಸಬೇಕಾಗಿಲ್ಲ. ಆಯೋಗ ಇದಕ್ಕಾಗಿ ವಿವರವಾದ ಎಲ್ಲ ಮಾಹಿತಿಗಳನ್ನು ಪ್ರಚುರಪಡಿಸಿದೆ. ಅನುಮಾನ ಇದ್ದಲ್ಲಿ ಇವುಗಳನ್ನು ಓದಿಕೊಳ್ಳಿ ಎಂದು ಸ್ನೇಹಲ್ ತಿಳಿಸಿದರು.
ಎಸ್‌ಐಆರ್, ಬಿಎಲ್‌ಓ, ಹಳೇ ಮತಪಟ್ಟಿ ಮಾಹಿತಿಗೆ ನೋಡಿ ಕೆಳಗಿನ ಲಿಂಕ್‌ಗೆ ಭೇಟಿ ನೀಡಿ
ಕೇಂದ್ರ ಚುನಾವಣಾ ಆಯೋಗ: voters.eci.gov.in
ರಾಜ್ಯ ಚುನಾವಣಾ ಆಯೋಗ: ceo.karnataka.gov.in
ನೋ ಡಾಕ್ಯೂಮೆಂಟ್ಸ್..: ಬಿಎಲ್‌ಓಗಳು ಮನೆಗೆ ಬಂದಾಗ ಅರ್ಜಿ ತುಂಬಿ ಸಹಿ ಮಾಡಿ ಕೊಟ್ಟರೆ ಸಾಕು. ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ. ಯಾವ ದಾಖಲೆಯನ್ನೂ ಕೇಳುವುದೂ ಇಲ್ಲ. ಮತಗಟ್ಟೆ ಅಧಿಕಾರಿ ಪ್ರತಿ ಮತದಾರರಿಗೂ ತಲಾ ಎರಡು ಅರ್ಜಿ ನಮೂನೆಗಳನ್ನು ಕೊಡುತ್ತಾರೆ. ಅವುಗಳನ್ನು ತುಂಬಿ ಮರಳಿಸುವುದಷ್ಟೇ ಸಾರ್ವಜನಿಕರ ಕೆಲಸ. ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಅರ್ಜಿಗಳನ್ನು ತುಂಬುವ ಅವಕಾಶವನ್ನು ಆಯೋಗ ಕಲ್ಪಿಸಿದೆ. ಭರ್ತಿ ಮಾಡಿದ ಅರ್ಜಿಯಲ್ಲಿ ಒಂದನ್ನು ತಾವು ಇಟ್ಟುಕೊಳ್ಳುತ್ತಾರೆ. ಇನ್ನೊಂದನ್ನು ಮತದಾರರಿಗೆ ಕೊಟ್ಟಿರುತ್ತಾರೆ. ಇದನ್ನು ಕಾದಿಟ್ಟುಕೊಳ್ಳಬೇಕು. ತಮ್ಮ ಬಳಿಯ ಅರ್ಜಿಯನ್ನು ಬಿಎಲ್‌ಓಗಳು ಡಿಜಿಟಲ್ ರೂಪದಲ್ಲಿ ಸ್ಕ್ಯಾನ್ ಮಾಡಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ ಎಂದು ಸ್ನೇಹಲ್ ವಿವರಿಸಿದರು.
ದಾಖಲೆ ಅಗತ್ಯ; ಆದರೆ ಯಾರಿಗೆ?: ಆದರೆ 01.07.1987ಕ್ಕೆ ಮೊದಲು ಜನಿಸಿದವರು ಮಾತ್ರ ಚುನಾವಣಾ ಆಯೋಗ ಸೂಚಿಸಿರುವ ಹನ್ನೆರಡಲ್ಲಿ ಒಂದು ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ. ಎಸ್‌ಐಆರ್‌ಗೆ ಸಿಬ್ಬಂದಿ ಆಗಮಿಸಿದಾಗ ಈ ದಾಖಲೆಯನ್ನು ಸಲ್ಲಿಸಬೇಕಾಗಿಲ್ಲ. 1987ರ ಮೊದಲು ಜನಿಸಿದವರಿಗೆ ಪರಿಷ್ಕರಣೆ ಮುಗಿದ ಮೇಲೆ ನೊಟೀಸ್ ಕೊಡಲಾಗುತ್ತದೆ. ಆ ನಂತರ ಅವರು ಸಂಬಂಧಿಸಿದ ಬಿಎಲ್‌ಓಗಳಿಗೆ ದಾಖಲೆಗಳನ್ನು ಸಲ್ಲಿಸಿದರೆ ಸಾಕು. ಹೆಚ್ಚಿನ ಯಾವುದೇ ಗೊಂದಲವಿಲ್ಲ ಎಂದು ಜಿಲ್ಲಾಧಿಕಾರಿಗಳು ಜನರ ಅನುಮಾನಗಳಿಗೆ ಸ್ಪಷ್ಟಪಡಿಸಿದರು.
2002 ಎಂಬುದೇ ದೊಡ್ಡ ಟೆನ್ಷನ್!: ಮತದಾರರಿಗೆ 2002ರ ಮತಪಟ್ಟಿ ದಾಖಲೆಗಳನ್ನು ಎಲ್ಲಿಂದ ಹುಡುಕುವುದು ಎಂಬುದೇ ಬಹುದೊಡ್ಡ ಟೆನ್ಷನ್ ವಿಷಯವಾಗಿದೆ. ಏಕೆಂದರೆ ಎಸ್‌ಐಆರ್‌ಗೂ 2002ರ ಮತಪಟ್ಟಿಯೇ ಮೂಲ ದಾಖಲೆಯಾಗಿ ಪರಿಗಣಿತವಾಗುತ್ತಿದೆ. ಈ ಅಂಶ ಫೋನ್ ಇನ್‌ನಲ್ಲೂ ಅನುರಣಿಸಿತು. ಎಲ್ಲ ಕರೆಗಳ ಅಂತರಾಳ ಈ ಪ್ರಶ್ನೆಯಿಂದಲೇ ಕೂಡಿತ್ತು. ಇದಕ್ಕೆ ಜಿಲ್ಲಾಧಿಕಾರಿಗಳು ನೀಡಿದ ಉತ್ತರ ಜನರ ಆತಂಕವನ್ನು ದೂರ ಮಾಡಿತು.
`ಯಾರೂ 2002ರ ಮತಪಟ್ಟಿ ಅಥವಾ ದಾಖಲೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಈ ಕಾಲಂ ಖಾಲಿ ಬಿಟ್ಟುಬಿಡಿ. ಆಕ್ಷೇಪಣೆ ಸಲ್ಲಿಕೆ ಅವಧಿಯಲ್ಲಿ ಈ ಬಗ್ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ಅಲ್ಲದೇ ನಿಯಮಬದ್ಧ ಘೋಷಣೆಗೂ ಈ ಅವಧಿಯಲ್ಲಿ ಅವಕಾಶವಿದೆ. 2002ರಲ್ಲಿ ತಂದೆ, ತಾಯಿಯ ಹೆಸರು ಮತಪಟ್ಟಿಯಲ್ಲಿ ಇಲ್ಲದಿದ್ದರೆ, ಅಜ್ಜ- ದೊಡ್ಡಪ್ಪ ಮತ್ತಿತರ ಹತ್ತಿರದ ಬಂಧುಗಳ ಹೆಸರಿದ್ದರೂ ಸ್ವೀಕಾರ್ಹ’ ಎಂದು ಸ್ನೇಹಲ್ ವಿವರಿಸಿದರು.
ಏಕೆ ಮೂಡಿದೆ ಆತಂಕ…?, ಎಂದು ನಡೆದಿತ್ತು ಈ ಕಾರ್ಯ?: ಎಸ್‌ಐಆರ್ ಪ್ರಕ್ರಿಯೆ ಕುರಿತು ಶಿಕ್ಷಿತರೂ ಸೇರಿ ಪ್ರತಿಯೊಬ್ಬರಿಗೆ ಅವರದ್ದೇ ಆದ ಅನುಮಾನಗಳಿವೆ. ಆತಂಕವಂತೂ ತುಸು ಹೆಚ್ಚೆ ಎನಿಸುವಂತಿದೆ. ಏಕೆ? ಎಸ್‌ಐಆರ್ ಹೆಸರು ಕೇಳಿದರೆ ಜನಕ್ಕೆ ಹೆದರಿಕೆ ಮೂಡುವಂತಾಗಿದೆಯಲ್ಲ, ಏನಿದು? ಮತಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಎಂದರೇನು? ಈಗ ಏಕೆ ಕೈಗೆತ್ತಿಕೊಳ್ಳಲಾಗಿದೆ? ದಾಖಲೆಗಳ ನೆಪ ಒಡ್ಡಿ ದಶಕಗಳಿಂದ ವೋಟ್ ಮಾಡುತ್ತಿರುವ ನಮ್ಮನ್ನು ಅಥವಾ ಆಯ್ದ ಕೆಲವರನ್ನು ಕೈಬಿಡುವ ಹುನ್ನಾರ ನಡೆಯುತ್ತಿದೆಯೇ?
`ಬಹುತೇಕರ ಆತಂಕಕ್ಕೆ ಮುಖ್ಯ ಕಾರಣ, ಹಳೆಯ ಮನೆ-ಹೊಸ ಮನೆ ಸಮಸ್ಯೆ ಎನ್ನಬಹುದು. ಅಂದರೆ ಅನೇಕರ ಮನೆ ವಿಳಾಸ ಬದಲಾಗಿದೆ. ಆದರೆ ಮತಗಟ್ಟೆ ವರ್ಗಾವಣೆಯಾಗಿಲ್ಲ. ಇದೊಂದು ಸಾಮಾನ್ಯ ಸಮಸ್ಯೆ. ಆದ್ದರಿಂದ ಯಾರೂ ಆತಂಕಿತರಾಗಬೇಡಿ. ನೀವು ಹಿಂದೆ ಮತದಾನ ಮಾಡಿದ ಮತಗಟ್ಟೆಯ ಬಿಎಲ್‌ಓ ಅವರನ್ನು ಸಂಪರ್ಕಿಸಿ. ಮನೆ ಬದಲಿಸಿದ ಮಾತ್ರಕ್ಕೆ ನಿಮ್ಮ ಹೆಸರು ಡಿಲೀಟ್ ಆಗಲ್ಲ. ಹಾಗೇ, ಎಸ್‌ಐಆರ್ ವೇಳೆ ಸಲ್ಲಿಕೆಯಾಗುವ ಯಾವ ಅರ್ಜಿಯೂ ತಿರಸ್ಕೃತವಾಗಲ್ಲ. ಟೆನ್ಷನ್ ಬಿಲ್‌ಕುಲ್ ಬೇಡವೇ ಬೇಡ’ ಎಂದು ಸ್ನೇಹಲ್ ಸ್ಪಷ್ಟವಾಗಿ ನುಡಿದರು.
25 ವರ್ಷದ ಹಿಂದೆ ನಡೆದಿತ್ತು ಎಸ್‌ಐಆರ್: ನಿಯಮಾನುಸಾರ ಎಸ್‌ಐಆರ್ ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಚುನಾವಣಾ ಆಯೋಗದ ಸಾಂವಿಧಾನಿಕ ಪ್ರಕ್ರಿಯೆ. 2002ರಲ್ಲಿ ಮೊದಲ ಬಾರಿಗೆ ಇದು ನಡೆದಿತ್ತು. ಅರ್ಹರನ್ನು ಮಾತ್ರ ಮತಪಟ್ಟಿಯಲ್ಲಿ ಉಳಿಸುವುದು ಹಾಗೂ ಅನರ್ಹ ಮತಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವುದು ಇದರ ಉದ್ದೇಶವೇ ವಿನಾ ಇನ್ಯಾವುದೇ ದುರುದ್ದೇಶದ ಕೆಲಸ ಇದಲ್ಲ ಎಂದು ಚುನಾವಣಾಧಿಕಾರಿಗಳು ಪ್ರಶ್ನೆಯೊಂದಕ್ಕೆ ತಿಳಿಸಿದರು.
ಸತ್ತವರ ಮಾಹಿತಿ ಕೊಟ್ಟರೆ ಹುಷಾರ್!: ಎಸ್‌ಐಆರ್ ವೇಳೆ ಮೃತಪಟ್ಟವರ ಮಾಹಿತಿಯನ್ನು ತುಂಬಿ ಕೊಡುವಂತಿಲ್ಲ. ಒಂದು ವೇಳೆ ಸಲ್ಲಿಸಿದರೆ ಅಂತಹ ಮನೆಯವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಸತ್ತವರ ಮಾಹಿತಿಯನ್ನು ತುಂಬಿ ಕೊಡುವುದು ಅಥವಾ ಎರಡೆರಡು ಕಡೆ ಮತ ಇರುವುದು ಎರಡೂ ಕಾನೂನು ಬಾಹಿರ.
ಎಸ್‌ಐಆರ್ ನಂತರ ಒಂದಕ್ಕಿಂತ ಹೆಚ್ಚು ಕಡೆ ಇರುವ ಮತಗಳೇನೋ ಪರಿಷ್ಕರಣೆಗೊಳ್ಳುತ್ತವೆ. ಆದರೆ ಸತ್ತವರ ವಿಷಯವಾಗಿ ಬಿಎಲ್‌ಓಗಳಿಗೆ (ಅಂದರೆ ಆಯೋಗಕ್ಕೆ) ಮಾಹಿತಿ ಇರುವುದಿಲ್ಲ. ಹೀಗಾಗಿ ಎಸ್‌ಐಆರ್ ಅರ್ಜಿ ಮೃತರ ಹೆಸರಲ್ಲೂ ಇರುವುದು ಸಹಜ. ಇಂತಹ ಅರ್ಜಿಯನ್ನು ಮನೆಯವರಿಗೆ ಕೊಟ್ಟಾಗ, ಸಂಬಂಧಿಸಿದ ಮನೆಯವರು ತಮ್ಮ ಮನೆಯಲ್ಲಿನ ಈ ವ್ಯಕ್ತಿ ಜೀವಂತ ಇಲ್ಲ ಎಂಬುದನ್ನು ಬಿಎಲ್‌ಓಗೆ ತಿಳಿಸಬೇಕು. ಹಾಗೂ ಸತ್ತವರ ಹೆಸರಿನ ಅರ್ಜಿಯನ್ನು ಭರ್ತಿ ಮಾಡದೇ ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಹಳೇ ಫೋಟೊ ಏಕೆ, ಹೊಸ ಫೋಟೊ ಕೊಡಿ ಎಂದ ಡಿಸಿ: ಎಸ್‌ಐಆರ್ ವೇಳೆ ಯಾವುದೇ ದಾಖಲೆಗಳನ್ನೂ ಸಲ್ಲಿಸಬೇಕಿಲ್ಲ ನಿಜ. ಆದರೆ ಪ್ರತಿಯೊಬ್ಬರೂ ತಮ್ಮ ಈಚಿನ ಪಾಸ್‌ಪೋರ್ಟ್ ಆಕಾರದ ಭಾವಚಿತ್ರ ಕೊಟ್ಟರೆ ಒಳ್ಳೆಯದು ಎಂದು ಜಿಲ್ಲಾಧಿಕಾರಿಗಳು ಜನತೆಗೆ ಸಲಹೆ ಮಾಡಿದರು. ಫೋಟೋ ಕೊಡುವುದು ಕಡ್ಡಾಯವೇನಲ್ಲ. ಆದರೆ ಹೊಸ ಭಾವಚಿತ್ರವನ್ನು ಕೊಟ್ಟರೆ ಮುಂದಿನ ಮತದಾರರ ಗುರುತಿನ ಚೀಟಿಯಲ್ಲಿ (ಎಪಿಕ್ ಕಾರ್ಡ್) ಹೊಸ ಫೋಟೊ ಬಂದಂತಾಗುತ್ತದಲ್ಲವೇ ಎಂದು ಅವರು ಸಾರ್ವಜನಿಕರೊಬ್ಬರಿಗೆ ಹಾಸ್ಯಮಯವಾಗಿ ಕೇಳಿದರು.
ಎಸ್‌ಐಆರ್‌ಗೆ ಬಂದೇ ಬರ‍್ತಾರೆ! ಇಲ್ದಿದ್ರೆ ಏಜೆಂಟರು ಬಿಡಬೇಕಲ್ಲ: ಎಸ್‌ಐಆರ್ ಎನ್ಯೂಮರೇಷನ್ ಫಾರ್ಮ್ ಆನ್‌ಲೈನ್‌ನಲ್ಲಿ ತುಂಬಿ ಕೊಡಲೂ ಅವಕಾಶ ಇರುವುದರಿಂದ, ಪ್ರತಿ ಮನೆಗೂ ಬಿಎಲ್‌ಓಗಳು ಬಂದೇ ಬರುವರೇ ಅಥವಾ ಕೆಲವು ಮನೆಗಳಿಗೆ ಬರುವುದಿಲ್ಲವೇ ಎನ್ನುವ ಪ್ರಶ್ನೆಯೂ ಫೋನ್ ಇನ್‌ನಲ್ಲಿ ಕೇಳಿ ಬಂತು.
`ಬಿಎಲ್‌ಓಗಳು ಬಿಟ್ಟರೂ ಬಿಎಲ್‌ಎಗಳು (ರಾಜಕೀಯ ಪಕ್ಷಗಳಿಗೆ ಸೇರಿದ ಬೂತ್ ಮಟ್ಟದ ಏಜೆಂಟರು) ಬಿಡಬೇಕಲ್ಲ? ಹೀಗಾಗಿ ಪ್ರತಿ ಮನೆಗೂ ಬಿಎಲ್‌ಓಗಳು ಬಂದೇ ಬರುತ್ತಾರೆ. ಸಧ್ಯ ಜಿಲ್ಲೆಯಲ್ಲಿ 1,665 ಕಾಂಗ್ರೆಸ್ ಮತ್ತು ಇಷ್ಟೇ ಸಂಖ್ಯೆಯ ಬಿಜೆಪಿ ಬಿಎಲ್‌ಎಗಳನ್ನು ಬಿಎಲ್‌ಓಗಳ ಜೊತೆ ಸಮನ್ವಯ ಮಾಡಲಾಗಿದೆ. ಉಳಿದಂತೆ ಸುಮಾರು 300ರಷ್ಟು ಜೆಡಿಎಸ್ ಮತ್ತಿತರ ಪಕ್ಷಗಳ ಏಜೆಂಟರೂ ಇರುತ್ತಾರೆ. ಹೀಗಾಗಿ ಯಾವುದೇ ಸಾರ್ವಜನಿಕರು ಕೈತಪ್ಪಿ ಹೋಗುವುದಿಲ್ಲ’ ಎಂದು ಸ್ನೇಹಲ್ ನಕ್ಕರು. ಒಂದು ವೇಳೆ ಬಾರದಿದ್ದರೆ, ಆಗ ತಮ್ಮ ಸಮೀಪದ ಫೆಸಿಲಿಟೇಷನ್ ಕೇಂದ್ರ (ಮತಗಟ್ಟೆ ಸಹಾಯ ಕೇಂದ್ರ) ಸಂಪರ್ಕಿಸಿ ಅರ್ಜಿ ತುಂಬಿಕೊಡುವುದಕ್ಕೆ ಅವಕಾಶ ಇದ್ದೇ ಇದೆ.
ಜಾತಿ-ಧರ್ಮಕ್ಕೆ ಸಂಬಂಧ ಇಲ್ಲ; ಮೋಸ ಆಗೋದು ಅಸಾಧ್ಯ: ಎಸ್‌ಐಆರ್ ಜಾತಿ ಧರ್ಮಕ್ಕೆ ಸಂಬಂಧಿಸಿದ ವಿಷಯವಲ್ಲ. ಯಾರನ್ನೋ ಗುರಿಯಾಗಿಸಿ ನಡೆಯುತ್ತಿಲ್ಲ. ಅಥವಾ ಕೆಲವರು ಮಾಡುತ್ತಿರುವಂತೆ ಯಾರನ್ನೋ ಮತದಾರರ ಪಟ್ಟಿಯಿಂದ ಕೈಬಿಡುವುದು ಸಾಧ್ಯವೂ ಇಲ್ಲ. ಇದೊಂದು ಅತ್ಯಂತ ಪಾರದರ್ಶಕ, ನಿಯಮಬದ್ಧ ಮತ್ತು ಸರ್ಕಾರಿ ಸಿಬ್ಬಂದಿ ಕೈಯಾಡಿಸಲು (ಮ್ಯಾನಿಪ್ಯೂಲೇಷನ್ ಮಾಡಲು) ಸಾಧ್ಯವೇ ಇಲ್ಲದ ಸಾರ್ವಜನಿಕ ಕಾರ್ಯ. ಜನತೆ ತುಂಬಿ ಕೊಡುವ ಪರಿಷ್ಕರಣೆ ಅರ್ಜಿಯನ್ನು ನಾವು ತಿರಸ್ಕರಿಸುವುದಕ್ಕೆ ಸಾಧ್ಯವೇ ಇಲ್ಲ. ಅಂತಿಮ ಪಟ್ಟಿ ಪ್ರಕಟವಾಗುವಾಗ ಅನರ್ಹತೆ ಕಂಡು ಬಂದವರಷ್ಟೇ ಡಿಲೀಟ್ ಆಗುತ್ತಾರೆ ಎಂದು ಸ್ನೇಹಲ್ ವಿವರಿಸಿದರು.
ವೋಟ್ ಟ್ರಾನ್ಸ್‌ಫರ್ ಸದ್ಯ ಬೇಡ: ಎಸ್‌ಐಆರ್ ಪ್ರಕ್ರಿಯೆ ಮುಗಿಯುವವರೆಗೆ ತಮ್ಮ ಮತಗಳನ್ನು ವರ್ಗಾಯಿಸಿಕೊಳ್ಳುವುದನ್ನು ತಡೆಹಿಡಿಯಿರಿ. ಇದು ಎಲ್ಲರಿಗೂ ಅನುಕೂಲಕರ. ಇಲ್ಲವಾದರೆ ಅನಗತ್ಯವಾಗಿ ಕ್ಲಿಷ್ಟ ಪ್ರಕ್ರಿಯೆಗಳಿಗೆ ತೆರೆದುಕೊಳ್ಳಬೇಕಾಗುತ್ತದೆ. ಎಸ್‌ಐಆರ್ ಮುಗಿದ ಮೇಲೆ ನಿಮ್ಮ ಮತವನ್ನು ವರ್ಗಾವಣೆ ಮಾಡಿಕೊಳ್ಳಲು ಅವಕಾಶ ಇದ್ದೇ ಇದೆ ಎಂದು ಸ್ನೇಹಲ್ ಸಲಹೆ ಮಾಡಿದರು.
ಸಹಿ ಮಾಡಿಕೊಟ್ಟರೆ ಸಾಕು: ಅನಕ್ಷರಸ್ಥರು ಅರ್ಜಿ ತುಂಬಿ ಕೊಡುವುದು ಹೇಗೆಂಬ ಚಿಂತೆಯನ್ನು ಬಿಡಿ. ಮನೆಗೆ ಬರುವ ಬಿಎಲ್‌ಓಗಳು ನೀಡುವ ಅರ್ಜಿಗೆ ಸಹಿ ಮಾಡಿ ಮರಳಿಸಿ ಸಾಕು ಎಂದು ಜಿಲ್ಲಾಧಿಕಾರಿಗಳು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಆತ್ಮೀಯ ಸ್ವಾಗತ, ಗೌರವ: ಸಂಯುಕ್ತ ಕರ್ನಾಟಕ' ಫೋನ್ ಇನ್‌ಗೆ ಆಗಮಿಸಿದ ಜಿಲ್ಲಾಧಿಕಾರಿ ಆರ್. ಸ್ನೇಹಲ್ ಅವರನ್ನು ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಕೇಶವ್ ದೇಸಾಯಿ ಸ್ವಾಗತಿಸಿದರು. ಟ್ರಸ್ಟ್‌ನ ಪ್ರಮುಖ ಪ್ರಕಟಣೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಗೌರವಿಸಿದ ಅವರು,ಸಾರ್ವಜನಿಕರಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿರುವ ಎಸ್‌ಐಆರ್ ಕುರಿತು ಫೋನ್ ಇನ್‌ಗೆ ಸಮ್ಮತಿಸಿದ್ದಕ್ಕೆ ಕೃತಜ್ಞತೆ’ ವ್ಯಕ್ತಪಡಿಸಿದರು. `ಸಂಯುಕ್ತ ಕರ್ನಾಟಕ’ ಸಿಇಓ ಮತ್ತು ಕಾರ್ಯನಿರ್ವಾಹಕ ಸಂಪಾದಕ ಮೋಹನ ಹೆಗಡೆ ಜಿಲ್ಲಾಧಿಕಾರಿಗಳಿಗೆ ಹೂಗುಚ್ಛ ನೀಡಿ ಗೌರವ ಸಲ್ಲಿಸಿದರು.
ಬಿಡುವಿಲ್ಲದೇ ಕರೆಗಳು…: ಜಿಲ್ಲಾಧಿಕಾರಿಗಳಿಗೆ ಒಂದು ನಿಮಿಷವೂ ಬಿಡುವಿಲ್ಲದಂತೆ ಕರೆಗಳ ಮಹಾಪೂರವೇ ಹರಿದು ಬಂತು. ಎಸ್‌ಐಆರ್ ಕುರಿತು ಇರುವ ಸಣ್ಣ ಪುಟ್ಟ ಆತಂಕಗಳನ್ನೂ ತೋಡಿಕೊಂಡ ಓದುಗರಿಗೆ ಸ್ವಲ್ಪವೂ ಬೇಸರ ಮಾಡಿಕೊಳ್ಳದೇ ಸ್ನೆಹಲ್ ಅವರು ನೀಡಿದ ಸಮಾಧಾನದ ಉತ್ತರಗಳು ಗಮನ ಸೆಳೆದವು. ಜಿಲ್ಲಾಧಿಕಾರಿಗಳ ಸಹನೆ ಮತ್ತು ಧೈರ್ಯ ತುಂಬಿದ ರೀತಿಗೆ ಆತಂಕದ ಕರೆ ಮಾಡಿದವರು ಸಂತೋಷದಿಂದ ಥ್ಯಾಂಕ್ಯೂ ಮೇಡಂ ಎಂದು ಫೋನಿಡುತ್ತಿದ್ದರು.




















