ಹುಬ್ಬಳ್ಳಿ: ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಒತ್ತಡ ಮತ್ತು ಜಟಾಪಟಿಗಳ ನಡುವೆಯೇ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಅವರು ಸಕ್ರಿಯ ರಾಜಕೀಯದ ಗದ್ದಲದಿಂದ ತಾತ್ಕಾಲಿಕವಾಗಿ ದೂರ ಸರಿದು ತಮ್ಮ ಮೂಲ ಕಾಯಕವಾದ ಕೃಷಿಯತ್ತ ಮುಖ ಮಾಡಿದ್ದಾರೆ. ಪ್ರಕೃತಿಯ ಮಡಿಲಿನಲ್ಲಿರುವ ತಮ್ಮ ‘ನಿಸರ್ಗ’ ತೋಟದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹೊರಟ್ಟಿ ಅವರ ಸರಳ ಬದುಕಿನ ಚಿತ್ರಣ ಇದೀಗ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆಯುತ್ತಿದೆ.
ದಶಕಗಳ ಕಾಲ ರಾಜಕೀಯ, ಸಾರ್ವಜನಿಕ ಜೀವನ ಮತ್ತು ಶಿಕ್ಷಕರ ಹಿತಾಸಕ್ತಿಗಳ ವಿಚಾರದಲ್ಲಿ ಸಕ್ರಿಯರಾಗಿದ್ದ ಹೊರಟ್ಟಿ ಅವರು ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಬೇಸರಗೊಂಡಿರುವ ಸಂದರ್ಭದಲ್ಲಿ ಕೃಷಿಯತ್ತ ಮರಳಿರುವುದು ವಿಶೇಷವಾಗಿ ಚರ್ಚೆಗೆ ಕಾರಣವಾಗಿದೆ. ಸದಾ ಸಭೆ, ಸಮಾರಂಭ, ರಾಜಕೀಯ ಚರ್ಚೆ ಮತ್ತು ಜನರ ಭೇಟಿ-ಮಾತುಕತೆಯಲ್ಲಿ ನಿರತರಾಗಿರುತ್ತಿದ್ದ ಹಿರಿಯ ನಾಯಕ, ಇದೀಗ ಹಸಿರಿನ ನಡುವೆ ಮಣ್ಣಿನೊಂದಿಗೆ ಸಮಯ ಕಳೆಯುತ್ತಿದ್ದಾರೆ.
‘ನಿಸರ್ಗ’ ತೋಟದಲ್ಲಿ ಕೃಷಿಕರಾಗಿ ಹೊರಟ್ಟಿ : ರಾಜಕೀಯದ ಒತ್ತಡದಿಂದ ಮನಸ್ಸಿಗೆ ಕೊಂಚ ನೆಮ್ಮದಿ ಪಡೆಯಲು ಹೊರಟ್ಟಿ ಅವರು ತಮ್ಮದೇ ಆದ ‘ನಿಸರ್ಗ’ ತೋಟದ ವಾತಾವರಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತೋಟಕ್ಕೆ ತೆರಳಿದ ಅವರು ಕೃಷಿ ಚಟುವಟಿಕೆಗಳನ್ನು ಸ್ವತಃ ವೀಕ್ಷಿಸಿ, ಹೊಲ ಮತ್ತು ತೋಟದ ವಿವಿಧ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ತಮ್ಮ ಮೂಲ ಕಾಯಕವಾದ ಕೃಷಿಯೊಂದಿಗೆ ಮತ್ತೆ ನಿಕಟವಾಗಿ ಬೆರೆತಿರುವ ಅವರು, ತೋಟದಲ್ಲಿ ಸುತ್ತಾಡುತ್ತಾ ಕೃಷಿ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸಿದ್ದಾರೆ. ಹಸಿರಿನ ವಾತಾವರಣದಲ್ಲಿ ಕೆಲಕಾಲ ನಿರಾಳವಾಗಿ ಕಳೆಯುವ ಮೂಲಕ ರಾಜಕೀಯದ ಜಂಜಾಟದಿಂದ ಮನಸ್ಸನ್ನು ದೂರವಿಡುವ ಪ್ರಯತ್ನ ನಡೆಸಿದ್ದಾರೆ.
ಹಸು, ನಾಯಿಗಳೊಂದಿಗೆ ಆತ್ಮೀಯ ಸಮಯ : ಕೃಷಿಯ ಜೊತೆಗೆ ಹೊರಟ್ಟಿ ಅವರಿಗೆ ಪ್ರಾಣಿಗಳ ಮೇಲೂ ವಿಶೇಷ ಪ್ರೀತಿ ಇದೆ. ‘ನಿಸರ್ಗ’ ತೋಟದಲ್ಲಿರುವ ತಮ್ಮ ಪ್ರೀತಿಯ ಹಸುಗಳು ಹಾಗೂ ನಾಯಿಗಳೊಂದಿಗೆ ಸಮಯ ಕಳೆಯುತ್ತಾ, ಅವುಗಳೊಂದಿಗೆ ಆಟವಾಡಿ ಆತ್ಮೀಯ ಕ್ಷಣಗಳನ್ನು ಕಳೆದಿದ್ದಾರೆ. ರಾಜಕೀಯ ಜೀವನದ ಒತ್ತಡದ ನಡುವೆ ಇಂತಹ ಸರಳ ಕ್ಷಣಗಳು ತಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂಬ ಭಾವನೆ ಅವರದಾಗಿದ್ದೆ ಎನ್ನಲಾಗಿದೆ.
“ರಾಜಕಾರಣ ಏನೇ ಇರಲಿ, ಪ್ರಕೃತಿ ಮತ್ತು ಕೃಷಿ ನೀಡುವ ನೆಮ್ಮದಿ ಬೇರೆಲ್ಲೂ ಸಿಗುವುದಿಲ್ಲ. ಮಣ್ಣಿನೊಂದಿಗೆ ಕಳೆಯುವ ಪ್ರತಿ ಕ್ಷಣವೂ ಹೊಸ ಚೈತನ್ಯ ನೀಡುತ್ತದೆ” ಎಂಬ ಅಭಿಪ್ರಾಯವನ್ನು ಹೊರಟ್ಟಿ ಅವರು ಆಪ್ತರ ಬಳಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬೆಂಬಲಿಗರಿಂದ ಧೈರ್ಯ : ಹೊರಟ್ಟಿ ಅವರು ರಾಜಕೀಯ ಬೆಳವಣಿಗೆಗಳಿಂದ ಬೇಸರಗೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಅವರೊಂದಿಗೆ ಸಂಪರ್ಕ ಸಾಧಿಸಿದ್ದಾರೆ ಎನ್ನಲಾಗಿದೆ. ದೂರವಾಣಿ ಕರೆಗಳ ಮೂಲಕ ವಿಚಾರಿಸುವುದರ ಜೊತೆಗೆ ಹಲವು ಶಿಕ್ಷಕರು, ಸಾರ್ವಜನಿಕರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ಜನಪ್ರತಿನಿಧಿಗಳು ಅವರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಹೊರಟ್ಟಿ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿರುವ ಶಿಕ್ಷಕರು ಮತ್ತು ಸಾರ್ವಜನಿಕರು, ಯಾವುದೇ ಪರಿಸ್ಥಿತಿಯಲ್ಲಿಯೂ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಹಿರಿಯ ನಾಯಕನಿಗೆ ಧೃತಿಗೆಡದಂತೆ ನೈತಿಕ ಸ್ಥೈರ್ಯ ತುಂಬಿರುವ ಬೆಂಬಲಿಗರು, ರಾಜಕೀಯ ಏರಿಳಿತಗಳು ಸಹಜವಾಗಿದ್ದು, ಸಾರ್ವಜನಿಕ ಜೀವನದಲ್ಲಿ ಅವರ ಕೊಡುಗೆ ಹಾಗೂ ಸೇವೆಯನ್ನು ಜನರು ಮರೆಯುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.
ಮಣ್ಣಿನೊಂದಿಗೆ ಬೆಸೆದುಕೊಂಡ ಬದುಕು : ರಾಜಕೀಯ ಜೀವನದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿರುವ ಬಸವರಾಜ ಹೊರಟ್ಟಿ ಅವರಿಗೆ ಕೃಷಿ ಹೊಸ ಕ್ಷೇತ್ರವೇನಲ್ಲ. ರಾಜಕೀಯಕ್ಕೆ ಮುನ್ನ ಹಾಗೂ ರಾಜಕೀಯ ಜೀವನದ ನಡುವೆಯೂ ಕೃಷಿಯೊಂದಿಗೆ ತಮ್ಮ ನಂಟನ್ನು ಉಳಿಸಿಕೊಂಡಿರುವ ಅವರು, ಅವಕಾಶ ಸಿಕ್ಕಾಗಲೆಲ್ಲ ತೋಟ ಮತ್ತು ಕೃಷಿ ಚಟುವಟಿಕೆಗಳತ್ತ ಗಮನ ಹರಿಸುತ್ತಾರೆ.
ಇದೀಗ ರಾಜಕೀಯದ ಗದ್ದಲದಿಂದ ಕೊಂಚ ದೂರ ಉಳಿದಿರುವ ಸಂದರ್ಭದಲ್ಲಿ ಕೃಷಿಯತ್ತ ಹೆಚ್ಚು ಗಮನ ಹರಿಸಿರುವುದು ಅವರ ವ್ಯಕ್ತಿತ್ವದ ಮತ್ತೊಂದು ಮುಖವನ್ನು ಪರಿಚಯಿಸುತ್ತಿದೆ. ಅಧಿಕಾರ, ರಾಜಕೀಯ ಚರ್ಚೆ ಮತ್ತು ಸಾರ್ವಜನಿಕ ಜೀವನದ ಒತ್ತಡಗಳ ನಡುವೆ ಪ್ರಕೃತಿಯ ಮಡಿಲಿನಲ್ಲಿ ಒಂದಷ್ಟು ಸಮಯ ಕಳೆಯುತ್ತಿರುವ ಹೊರಟ್ಟಿ ಅವರ ಈ ಚಿತ್ರಣ ಸಾಮಾಜಿಕ ವಲಯದಲ್ಲಿಯೂ ಕುತೂಹಲ ಮೂಡಿಸಿದೆ.
ಸದ್ಯಕ್ಕೆ ‘ನಿಸರ್ಗ’ ತೋಟದ ಹಸಿರು, ಕೃಷಿ ಚಟುವಟಿಕೆಗಳು ಮತ್ತು ಪ್ರೀತಿಯ ಸಾಕುಪ್ರಾಣಿಗಳ ನಡುವೆ ಕಾಲ ಕಳೆಯುತ್ತಿರುವ ಬಸವರಾಜ ಹೊರಟ್ಟಿ, ರಾಜಕೀಯದ ಗದ್ದಲದಿಂದ ಕೊಂಚ ದೂರ ಸರಿದು ತಮ್ಮೊಳಗಿನ ಕೃಷಿಕನೊಂದಿಗೆ ಮತ್ತೊಮ್ಮೆ ಬೆಸೆದುಕೊಂಡಿರುವಂತೆ ಕಾಣುತ್ತಿದ್ದಾರೆ.






















