SK Home Ad
Home ಸುದ್ದಿ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆಹ್ವಾನ

ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆಹ್ವಾನ

0
43

ಮುಂಬಯಿ: ಭಾರತದ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನದಂದು, ರಿಲಯನ್ಸ್ ಫೌಂಡೇಶನ್ ತನ್ನ ಪ್ರಮುಖ ʻರಿಲಯನ್ಸ್ ಫೌಂಡೇಶನ್ ಸ್ಕಾಲರ್‌ಶಿಪ್ಸ್ 2026-27ʼ ಗಳಿಗೆ ಅರ್ಜಿ ಆಹ್ವಾನಿಸುವುದಾಗಿ ಘೋಷಿಸಿದೆ. ಇದು ಭಾರತದ ಬೆಳವಣಿಗೆಯ ಪಥದಲ್ಲಿ ಕೊಡುಗೆ ನೀಡುವ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಿದೆ.

ಶಿಕ್ಷಣವು ಜೀವನವನ್ನು ಪರಿವರ್ತಿಸುವ, ಸಮುದಾಯಗಳನ್ನು ಬಲಪಡಿಸುವ ಮತ್ತು ರಾಷ್ಟ್ರಗಳನ್ನು ನಿರ್ಮಿಸುವ ಶಕ್ತಿಯನ್ನು ಹೊಂದಿದೆ. ಈ ನಂಬಿಕೆಯಿಂದ ಪ್ರೇರಿತರಾಗಿ, ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಗಳು ದೇಶಾದ್ಯಂತ ಅಸಾಧಾರಣ ಯುವ ಪ್ರತಿಭೆಗಳನ್ನು ಗುರುತಿಸಿ ಬೆಂಬಲಿಸುತ್ತಿವೆ. ಇದು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಉನ್ನತ ಶಿಕ್ಷಣವನ್ನು ಮುಂದುವರಿಸಲು ಮತ್ತು ಬೆಳೆಯಲು ಅವಕಾಶಗಳನ್ನು ಒದಗಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ತಲುಪಿದೆ.

ರಿಲಯನ್ಸ್ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ವಿದ್ಯಾರ್ಥಿವೇತನವನ್ನು ಒದಗಿಸುತ್ತ ಬಂದಿದೆ. ಡಿಸೆಂಬರ್ 2022 ರಲ್ಲಿ, ರಿಲಯನ್ಸ್ ಸಂಸ್ಥಾಪಕ-ಅಧ್ಯಕ್ಷರಾದ ದಿವಂಗತ ಧೀರೂಭಾಯ್ ಅಂಬಾನಿ ಅವರ 90ನೇ ಜನ್ಮದಿನದಂದು, ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷರಾದ ನೀತಾ ಅಂಬಾನಿ ಅವರು, 10 ವರ್ಷಗಳಲ್ಲಿ ಹೆಚ್ಚುವರಿಯಾಗಿ 50 ಸಾವಿರ ವಿದ್ಯಾರ್ಥಿ ವೇತನಗಳನ್ನು ನೀಡುವುದಾಗಿ ಘೋಷಿಸಿದರು.

ಇದು ಭಾರತದ ಅತಿ ದೊಡ್ಡ ಖಾಸಗಿ ವಿದ್ಯಾರ್ಥಿ ವೇತನಗಳಲ್ಲಿ ಒಂದಾಗಿದೆ. ಇಲ್ಲಿಯವರೆಗೆ ರಿಲಯನ್ಸ್ 33 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳನ್ನು ನೀಡಿದೆ. ಕಳೆದ ವರ್ಷ ಆಯ್ಕೆಯಾದ 5,100 ಸ್ಕಾಲರ್‌ಶಿಪ್‌ ವಿಜೇತ ವಿದ್ಯಾರ್ಥಿಗಳು 27 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳ 1,350 ಸಂಸ್ಥೆಗಳಿಂದ ಬಂದವರಾಗಿದ್ದು, ಇದು ಭಾರತದ ವಿವಿಧ ಭಾಗಗಳ ಪ್ರತಿಭೆ ಮತ್ತು ಆಕಾಂಕ್ಷೆಗಳ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ.

ರಿಲಯನ್ಸ್ ಫೌಂಡೇಶನ್ ಪದವಿ ವಿದ್ಯಾರ್ಥಿ ವೇತನಗಳು: ಪ್ರತಿವರ್ಷ ಪ್ರತಿಭೆಯ ಅರ್ಹತೆ ಆಧಾರಿತ ಆಯ್ಕೆ ಪ್ರಕ್ರಿಯೆಯ ಮೂಲಕ 5 ಸಾವಿರ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಣೆ ನಡೆಯುತ್ತದೆ. ಇದು ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಅರ್ಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಮತ್ತು ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

ರಿಲಯನ್ಸ್ ಫೌಂಡೇಶನ್ ಸ್ನಾತಕೋತ್ತರ ವಿದ್ಯಾರ್ಥಿವೇತನಗಳು: ಇಂಜಿನಿಯರಿಂಗ್, ತಂತ್ರಜ್ಞಾನ, ಇಂಧನ ಮತ್ತು ಜೀವ ವಿಜ್ಞಾನ ಒಳಗೊಂಡಂತೆ ಭವಿಷ್ಯಕ್ಕೆ ಸಿದ್ಧವಾಗಿರುವ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿರುವ 100 ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಾರ್ಷಿಕವಾಗಿ ಇದು ಗುರುತಿಸುತ್ತದೆ. ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಾಮರ್ಥ್ಯದ ಆಧಾರದ ಮೇಲೆ ನೀಡಲಾಗುವ ಈ ವಿದ್ಯಾರ್ಥಿ ವೇತನಗಳು ನಾಳಿನ ಸವಾಲುಗಳನ್ನು ಎದುರಿಸಲು ಸಂಶೋಧಕರು, ನಾವೀನ್ಯಕಾರರು ಮತ್ತು ವೃತ್ತಿಪರರನ್ನು ಪೋಷಿಸಲು ಪ್ರಯತ್ನಿಸುತ್ತವೆ.

ಆಯ್ಕೆಯಾದ ಪದವಿ ವಿದ್ಯಾರ್ಥಿಗಳಿಗೆ ಅವರ ಕೋರ್ಸ್ ಅವಧಿಯಲ್ಲಿ ರೂ. 2 ಲಕ್ಷದವರೆಗೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರೂ. 6 ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು https://scholarships.reliancefoundation.org/ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪದವಿ ಆಯ್ಕೆ ಪ್ರಕ್ರಿಯೆಯು ಆಪ್ಟಿಟ್ಯೂಡ್ ಪರೀಕ್ಷೆ ಮತ್ತು ಆರ್ಥಿಕ ಹಿನ್ನೆಲೆಯನ್ನು ಒಳಗೊಂಡಿರುತ್ತದೆ. ಆದರೆ ಸ್ನಾತಕೋತ್ತರ ಅರ್ಜಿದಾರರನ್ನು ಶೈಕ್ಷಣಿಕ ಯೋಗ್ಯತೆ, ಸಾಮರ್ಥ್ಯ ಮತ್ತು ಇತರ ಆಯ್ಕೆ ಮಾನದಂಡಗಳ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಅರ್ಜಿ ಪ್ರಕ್ರಿಯೆಯ ಯಾವುದೇ ಹಂತದಲ್ಲೂ ಯಾವುದೇ ಶುಲ್ಕವಿರುವುದಿಲ್ಲ.

ವರ್ಷಗಳಿಂದ, ರಿಲಯನ್ಸ್ ಫೌಂಡೇಶನ್ ಸ್ಕಾಲರ್‌ಶಿಪ್ ಪಡೆದವರು ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಸಂಶೋಧನೆ, ಶಿಕ್ಷಣ, ಉದ್ಯಮಶೀಲತೆ, ಸಾರ್ವಜನಿಕ ನಾಯಕತ್ವ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಉತ್ಕೃಷ್ಟತೆ ಸಾಧಿಸುತ್ತಿದ್ದಾರೆ. ತಮ್ಮ ಸಮುದಾಯಗಳಲ್ಲಿ ಮತ್ತು ಅದಕ್ಕೂ ಮೀರಿದ ಕ್ಷೇತ್ರಗಳಲ್ಲಿ ಅರ್ಥಪೂರ್ಣ ಪ್ರಭಾವವನ್ನು ಸೃಷ್ಟಿಸುತ್ತಿದ್ದಾರೆ. ನಾಳಿನ ಭಾರತವನ್ನು ರೂಪಿಸಲು ಸಹಾಯ ಮಾಡುವ ಆಲೋಚನೆಗಳು, ನಾವೀನ್ಯತೆಗಳು ಮತ್ತು ನಾಯಕತ್ವವನ್ನು ಹೊಂದಿರುವ ಮತ್ತೊಂದು ಅಸಾಧಾರಣ ಯುವ ಮನಸ್ಸುಗಳ ತಂಡವನ್ನು ಸ್ವಾಗತಿಸಲು ರಿಲಯನ್ಸ್ ಫೌಂಡೇಶನ್ ಎದುರು ನೋಡುತ್ತಿದೆ.