SK Home Ad
Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ ಬಳಿಕ ಅಮಿತ್ ಶಾ ಅವರ ಬೆಳಗಾವಿ ಕಾರ್ಯಕ್ರಮವೂ ರದ್ದು!

ಹುಬ್ಬಳ್ಳಿ ಬಳಿಕ ಅಮಿತ್ ಶಾ ಅವರ ಬೆಳಗಾವಿ ಕಾರ್ಯಕ್ರಮವೂ ರದ್ದು!

0
105

ಹುಬ್ಬಳ್ಳಿ: ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಹುಬ್ಬಳ್ಳಿಯಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮದ ಬಳಿಕ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಗ್ರಾಮಕ್ಕೆ ತೆರಳುವ ಕಾರ್ಯಕ್ರಮವನ್ನೂ ರದ್ದುಪಡಿಸಿದ್ದಾರೆ.

ಶುಕ್ರವಾರ ತಡರಾತ್ರಿ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದ ಅಮಿತ್ ಶಾ ಅವರು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ಬೆಳಗ್ಗೆ ಗಬ್ಬೂರು ಬೈಪಾಸ್‌ನಲ್ಲಿರುವ ಕೆಎಲ್‌ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳ ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡ ಹಾಗೂ ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಬೇಕಿತ್ತು.

ಆದರೆ, ಬೆಳಗ್ಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಅಮಿತ್ ಶಾ ಅವರು ಹೋಟೆಲ್‌ನಲ್ಲೇ ವಿಶ್ರಾಂತಿ ಪಡೆದರು. ಅವರೊಂದಿಗೆ ಬಂದಿದ್ದ ವೈದ್ಯರ ತಂಡ ಮತ್ತು ಸ್ಥಳೀಯ ತಜ್ಞ ವೈದ್ಯರ ತಂಡ ಹೋಟೆಲ್‌ನಲ್ಲಿ ಆರೋಗ್ಯ ತಪಾಸಣೆ ಹಾಗೂ ಆರೈಕೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಅಮಿತ್ ಶಾ ಅವರ ಅನುಪಸ್ಥಿತಿಯಲ್ಲಿ ಕೆಎಲ್‌ಇ ವೈದ್ಯಕೀಯ ಕಾಲೇಜಿನ ನೂತನ ಕಟ್ಟಡ ಹಾಗೂ 1,200 ಹಾಸಿಗೆಗಳ ಆಸ್ಪತ್ರೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಸೇರಿದಂತೆ ಗಣ್ಯರು ಉದ್ಘಾಟಿಸಿದರು.

ಎಕ್ಸಂಬಾ ಕಾರ್ಯಕ್ರಮವೂ ರದ್ದು: ಹುಬ್ಬಳ್ಳಿ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಗ್ರಾಮಕ್ಕೆ ತೆರಳುವುದು ಅಮಿತ್ ಶಾ ಅವರ ಪೂರ್ವನಿಗದಿತ ಕಾರ್ಯಕ್ರಮವಾಗಿತ್ತು. ಎಕ್ಸಂಬಾದಲ್ಲಿ ಬೀರೇಶ್ವರ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಪ್ರಧಾನ ಕಚೇರಿ ಕಟ್ಟಡವನ್ನು ಉದ್ಘಾಟಿಸುವುದು ನಿಗದಿಯಾಗಿತ್ತು.

ಆದರೆ ಆರೋಗ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಗೈರಾದ ಬೆನ್ನಲ್ಲೇ ಎಕ್ಸಂಬಾ ಭೇಟಿಯನ್ನೂ ರದ್ದುಪಡಿಸಲಾಗಿದೆ. ಎಕ್ಸಂಬಾ ಕಾರ್ಯಕ್ರಮದ ಬಳಿಕ ರಾತ್ರಿ ದೆಹಲಿಗೆ ಮರಳುವ ವೇಳಾಪಟ್ಟಿಯೂ ಅಮಿತ್ ಶಾ ಅವರ ಪ್ರವಾಸದಲ್ಲಿ ನಿಗದಿಯಾಗಿತ್ತು.

ಈ ಮೂಲಕ ಎರಡು ದಿನಗಳ ಕರ್ನಾಟಕ ಪ್ರವಾಸದ ಪ್ರಮುಖ ಕಾರ್ಯಕ್ರಮಗಳಿಂದಲೂ ಅಮಿತ್ ಶಾ ದೂರ ಉಳಿದಂತಾಗಿದೆ. ಸದ್ಯ ವೈದ್ಯರ ಸಲಹೆಯಂತೆ ಅವರು ಹುಬ್ಬಳ್ಳಿಯ ಹೋಟೆಲ್‌ನಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.