ಧಾರವಾಡ : ಕರ್ನಾಟಕದ ಹಿರಿಯ ಮನೋವೈದ್ಯ, ಪ್ರೇರಣಾದಾಯಿ ವಾಗ್ಮಿ ಹಾಗೂ ಅಂಕಣಕಾರ ಡಾ. ಆನಂದ ಪಾಂಡುರಂಗಿ ಅವರ ನಿಧನ ಹೊಂದಿದ್ದಾರೆ. ಡಾ. ಆನಂದ ಪಾಂಡುರಂಗಿ (74) ಅವರಿಗೆ ಕಳೆದ ಎರಡು ದಿನಗಳ ಹಿಂದೆ ತೀವ್ರ ಹೃದಯಾಘಾತವಾದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು (ಗುರುವಾರ) ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ.
ಡಾ. ಆನಂದ ಪಾಂಡುರಂಗಿ ಅವರ ನಿಧನಕ್ಕೆ ನಾಡಿನ ಗಣ್ಣರಿಂದ ಸಂತಾಪ : ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹಾಗೂ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ನಾಡಿನ ಗಣ್ಯರು ಹಾಗೂ ಕೇಂದ್ರ ಮತ್ತು ರಾಜ್ಯ ಸಚಿವರು ಡಾ. ಆನಂದ ಪಾಂಡುರಂಗಿ ಅವರ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿ ಡಾ. ಪಾಂಡುರಂಗಿ ಅವರ ನಿಧನದಿಂದ ಒಬ್ಬ ಹಿರಿಯ ಸ್ನೇಹಿತ ಹಾಗೂ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದ್ದಾರೆ.
ಧಾರವಾಡದಲ್ಲಿ ದೀರ್ಘಕಾಲ ಮನೋವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ. ಆನಂದ ಪಾಂಡುರಂಗಿ ಅವರು ವೈದ್ಯಕೀಯ ಸೇವೆಯ ಜತೆಗೆ ಮಾನಸಿಕ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲೂ ಸಕ್ರಿಯರಾಗಿದ್ದರು. ವಿದ್ಯಾರ್ಥಿಗಳು, ಯುವಜನರು ಹಾಗೂ ಕುಟುಂಬಗಳಿಗೆ ಮಾರ್ಗದರ್ಶನ ನೀಡುವುದು, ವ್ಯಕ್ತಿತ್ವ ವಿಕಸನ ಮತ್ತು ಆತ್ಮವಿಶ್ವಾಸದ ಕುರಿತು ಉಪನ್ಯಾಸಗಳನ್ನು ನೀಡುವುದು ಅವರ ಸಾಮಾಜಿಕ ಚಟುವಟಿಕೆಗಳ ಪ್ರಮುಖ ಭಾಗವಾಗಿತ್ತು. ಅವರ ವೃತ್ತಿಪರ ಪರಿಚಯದಲ್ಲಿ ವಿದ್ಯಾರ್ಥಿ ಮಾರ್ಗದರ್ಶನ, ಪೋಷಕರ ಸಮಾಲೋಚನೆ, ಕಿಶೋರರ ಆರೈಕೆ ಮತ್ತು ವ್ಯಸನಮುಕ್ತಿ ಸೇವೆಗಳನ್ನೂ ಮಾಡುತ್ತಿದ್ದರು
ವೈದ್ಯಕೀಯ ಸೇವೆಯ ಜತೆಗೆ ಸಮಾಜದ ವಿವಿಧ ವರ್ಗಗಳಲ್ಲಿ ಮಾನಸಿಕ ಆರೋಗ್ಯದ ಅರಿವು ಮೂಡಿಸುವಲ್ಲಿ ಡಾ. ಪಾಂಡುರಂಗಿ ಅವರ ಪಾತ್ರ ಗಮನಾರ್ಹವಾಗಿತ್ತು. ಇತ್ತೀಚಿನ ವರ್ಷಗಳಲ್ಲಿಯೂ ಅವರು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 2026ರ ಮಾರ್ಚ್‌ನಲ್ಲಿ ಗದಗದಲ್ಲಿ ನಡೆದ ವ್ಯಸನಮುಕ್ತ ಸಮಾಜ ನಿರ್ಮಾಣದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮದ್ಯಪಾನ, ಧೂಮಪಾನ, ತಂಬಾಕು ಹಾಗೂ ಇತರ ವ್ಯಸನಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ಅಗತ್ಯವನ್ನು ಪ್ರತಿಪಾದಿಸಿದ್ದರು.
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಆರೋಗ್ಯಕರ ಜೀವನಶೈಲಿ ಹಾಗೂ ಮಾನಸಿಕ ದೃಢತೆಯ ಕುರಿತೂ ಅವರು ನಿರಂತರವಾಗಿ ಮಾತನಾಡುತ್ತಿದ್ದರು. 2025ರಲ್ಲಿ ಧಾರವಾಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರಿತು ಬೋಧನೆ ಮಾಡುವ ಅಗತ್ಯದ ಕುರಿತು ಅವರು ಉಪನ್ಯಾಸ ನೀಡಿದ್ದರು.
ಡಾ. ಆನಂದ ಪಾಂಡುರಂಗಿ ಅವರ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಅವರು ಭಾರತೀಯ ಮನೋವೈದ್ಯಕೀಯ ಸೊಸೈಟಿಯ ಲೈಫ್ ಫೆಲೋ ಆಗಿದ್ದರು.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















