ದಾವಣಗೆರೆ: ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದ ಪೋಸ್ಟ್ ವಿಚಾರವಾಗಿ ರೌಡಿಶೀಟರ್ ಖಾಲಿದ್ ಪೈಲ್ವಾನ್ ಹಾಗೂ ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಅವರ ಪುತ್ರರ ನಡುವೆ ಗಲಾಟೆ ನಡೆದು, ಪರಸ್ಪರ ಹಲ್ಲೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ನಗರದ ಶ್ರೀ ಕಲ್ಲೇಶ್ವರ ಮಿಲ್ ಬಳಿ ನಡೆದಿದೆ ಎನ್ನಲಾಗಿದೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಶುಭಾಶಯ ಕೋರಲು ಖಾಲಿದ್ ಪೈಲ್ವಾನ್ ಅವರು ಕಲ್ಲೇಶ್ವರ ಮಿಲ್ ಬಳಿ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ವೇಳೆ ಸಾದಿಕ್ ಪೈಲ್ವಾನ್ ಹಾಗೂ ಅಯೂಬ್ ಪೈಲ್ವಾನ್ ಅವರ ಪುತ್ರರು, ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಾದಿಕ್ ಪೈಲ್ವಾನ್ ಕುರಿತು ಹಾಕಲಾಗಿದ್ದ ಅವಹೇಳನಕಾರಿ ಪೋಸ್ಟ್ ಅನ್ನು ಅಳಿಸುವಂತೆ ಖಾಲಿದ್ ಪೈಲ್ವಾನ್ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ನೂಕಾಟ, ತಳ್ಳಾಟ ನಡೆದಿದ್ದು, ಬಳಿಕ ಪರಸ್ಪರ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಖಾಲಿದ್ ಪೈಲ್ವಾನ್ ಅವರು ವೀಡಿಯೊ ಹೇಳಿಕೆ ಬಿಡುಗಡೆ ಮಾಡಿ, ರಾಜಕೀಯವಾಗಿ ತಮ್ಮ ಏಳಿಗೆಯನ್ನು ಸಹಿಸಲಾಗದೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದು, ತಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಹಲ್ಲೆಗೊಳಗಾದ ಖಾಲಿದ್ ಪೈಲ್ವಾನ್ ಆಸ್ಪತ್ರೆಗೆ ತೆರಳಿ ಎಲ್ಎಲ್ಸಿ ಮಾಡಿಸಿಕೊಂಡಿದ್ದು, ಮತ್ತೊಂದು ಬಣದವರೂ ಆಸ್ಪತ್ರೆಯಲ್ಲಿ ಎಂಎಲ್ಸಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಎರಡೂ ಕಡೆಯವರಿಂದಲೂ ಸದ್ಯದವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ಪೊಲೀಸರು ಘಟನೆ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.





















