ಹುಬ್ಬಳ್ಳಿ: ಗಬ್ಬೂರು ವೃತ್ತದ ಬಳಿ ನಿರ್ಮಿಸಲಾದ ಕೆಎಲ್ಇ ಸಂಸ್ಥೆಯ ಜಗದ್ಗುರು ಗಂಗಾಧರ ಮೂರುಸಾವಿರಮಠದ ವೈದ್ಯಕೀಯ ಕಾಲೇಜು ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮಕ್ಕೆ ಶನಿವಾರ ಬೆಳಿಗ್ಗೆ ಅನಾರೋಗ್ಯ ಕಾರಣದಿಂದ ಗೈರಾಗಿದ್ದ ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ಅವರು ಸಂಜೆ ಚೇತರಿಸಿಕೊಂಡರು. ಅವರು ದೆಹಲಿಗೆ ವಾಪಸಾಗುವ ಮೊದಲು ಸಂಜೆ 5.10ಕ್ಕೆ ಜಗದ್ಗುರು ಗಂಗಾಧರ ಮೂರುಸಾವಿರ ಮಠದ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು.
ಕೆಎಲ್ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಾಧಿಪತಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಸಂಸ್ಥೆಯವತಿಯಿಂದ ಸತ್ಕರಿಸಿದರು.
ಕೆಎಲ್ಇ ವೈದ್ಯಕೀಯ ಕಾಲೇಜಿನ ನಿರ್ದೇಶಕರ ಕೊಠಡಿಯಲ್ಲಿ ಸುಮಾರು 10 ನಿಮಿಷಗಳ ಕಾಲ ಕುಳಿತುಕೊಂಡಿದ್ದ ಅಮಿತ್ ಶಾ, `ಬೆಳಗ್ಗೆಯಿಂದಲೇ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಎದ್ದೇಳಲಾಗದಷ್ಟು ನೋವಿದ್ದ ಪರಿಣಾಮ ಮೆಡಿಕಲ್ ಕಾಲೇಜು ಉದ್ಘಾಟನಾ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಅನ್ಯಥಾ ಭಾವಿಸಬೇಡಿ’ ಎಂದು ವಿನಂತಿಸಿಕೊಂಡರು. ಇದೇ ವೇಳೆ ಕೆಎಲ್ಇ ಸಂಸ್ಥೆಯವರು ಅಮಿತ್ ಶಾ ಅವರಿಗೆ ಹಾವೇರಿಯ ಏಲಕ್ಕಿ ಪೇಟ ತೊಡಿಸಿ ಗೌರವಿಸಿದರು.
ಡಾ.ಪ್ರಭಾಕರ ಕೋರೆ ಸೇರಿದಂತೆ ಕೆಎಲ್ಇ ಸಂಸ್ಥೆಯ ಕೆಲ ನಿರ್ದೇಶಕರು, ಕುಲಪತಿಯವರಿಂದ ಸಚಿವ ಅಮಿತ್ ಶಾ ಅವರು ನೂತನವಾಗಿ ನಿರ್ಮಿಸಲಾದ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ವೈದ್ಯಕೀಯ ಕ್ಷೇತ್ರದಲ್ಲಿ ನೂತನವಾಗಿ ಪರಿಚಯಿಸಲಾದ ಎಐ ಲ್ಯಾಬೊರೋಟರಿಯನ್ನು ಪರಿಶೀಲಿಸಿ 6 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ಶಾ ವಾಪಸಾದರು.






















