SK Home Ad
Home ಸುದ್ದಿ ದೇಶ ವಿಶ್ವ ಆನೆ ದಿನ: ಆನೆಗಳ ಸಂರಕ್ಷಣೆಗಾಗಿ ʻವನತಾರಾʼ ಹೊಸ ಹೆಜ್ಜೆ

ವಿಶ್ವ ಆನೆ ದಿನ: ಆನೆಗಳ ಸಂರಕ್ಷಣೆಗಾಗಿ ʻವನತಾರಾʼ ಹೊಸ ಹೆಜ್ಜೆ

0
101

ಜಾಮ್‌ನಗರ: ವಿಶ್ವ ಆನೆ ದಿನದ ಸಂದರ್ಭದಲ್ಲಿ ಅನಂತ್ ಅಂಬಾನಿ ಆರಂಭಿಸಿದ ವನತಾರಾ ಸಂಸ್ಥೆಯು ಆನೆಗಳ ಸಂರಕ್ಷಣೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಉಪಕ್ರಮಗಳನ್ನು ಹಂಚಿಕೊಂಡಿದೆ. ಆನೆಗಳ ಆರೈಕೆ, ಮಾವುತರಿಗೆ ತರಬೇತಿ, ಸಂರಕ್ಷಣೆಗೆ ಸಂಬಂಧಿಸಿದ ಜ್ಞಾನ ವಿನಿಮಯ ಹಾಗೂ ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡುವುದಕ್ಕೆ ವನತಾರಾ ಭಾರತದ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಾರ್ಯ ನಿರ್ವಹಿಸುತ್ತಿದೆ.

ವಂತಾರಾದಲ್ಲಿ ಸದ್ಯಕ್ಕೆ 260ಕ್ಕೂ ಹೆಚ್ಚು ಏಷ್ಯನ್ ಆನೆಗಳನ್ನು ಆರೈಕೆ ಮಾಡಲಾಗುತ್ತಿದೆ. ಇದು ʻಗೌರಿʼಯಿಂದ ಆರಂಭವಾಗಿತ್ತು, ಇದನ್ನು ಅನಂತ್ ಅಂಬಾನಿ ಮೊದಲು ರಕ್ಷಿಸಿದ್ದರು. ಇದರ ನಂತರ ಆನೆಗಳಿಗೆ ವಿಶೇಷ ಆರೈಕೆ ಮತ್ತು ಗೌರವಯುತ ಜೀವನವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಈ ಹೆಜ್ಜೆಯು ನಿರಂತರವಾಗಿ ಮುಂದುವರಿದಿದೆ.

ಅನಂತ್ ಅಂಬಾನಿ ಅವರು ಮಾತನಾಡಿ, “ಆನೆಗಳು ನನ್ನ ಹೃದಯದಲ್ಲಿ ಮತ್ತು ವನತಾರಾದ ಪಯಣದಲ್ಲಿ ಸದಾ ವಿಶೇಷ ಸ್ಥಾನವನ್ನು ಹೊಂದಿವೆ. ಪ್ರತಿ ಆನೆಗೂ ತನ್ನದೇ ಆದ ಕಥೆಯಿದೆ ಮತ್ತು ಪ್ರತಿ ರಕ್ಷಣೆಯು ಅವುಗಳ ಆರೈಕೆಯ ಜವಾಬ್ದಾರಿಯ ಅರಿವನ್ನು ಮೂಡಿಸುತ್ತದೆ. ಗೌರಿಯ ರಕ್ಷಣೆಯಿಂದ ಆರಂಭವಾದ ಈ ಪಯಣ ಈಗ ಆನೆಗಳ ಕಲ್ಯಾಣ, ಅವುಗಳನ್ನು ಆರೈಕೆ ಮಾಡುವವರಿಗೆ ಬೆಂಬಲ, ಜ್ಞಾನ ಹಂಚಿಕೆ ಮತ್ತು ಭಾರತ ಹಾಗೂ ವಿಶ್ವದಾದ್ಯಂತ ಸಂರಕ್ಷಣಾ ಪ್ರಯತ್ನಗಳವರೆಗೆ ತಲುಪಿದೆ. ವಿಶ್ವ ಆನೆ ದಿನದಂದು ಈ ಅದ್ಭುತ ಜೀವಿಗಳನ್ನು ಗೌರವಿಸುತ್ತಾ ಅವುಗಳ ಉತ್ತಮ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ಹೇಳುತ್ತೇವೆ” ಎಂದರು.

ಜೈಪುರದ ಆನೆ ಗ್ರಾಮದಲ್ಲಿ ವಿಶೇಷ ಸೌಲಭ್ಯಗಳು: ರಾಜಸ್ಥಾನ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಸಂಜಯ್ ಶರ್ಮಾ ಅವರು ವಿಶ್ವ ಆನೆ ದಿನದ ಸಂದರ್ಭದಲ್ಲಿ ಜೈಪುರ್ ಆನೆ ಗ್ರಾಮದಲ್ಲಿ ಆನೆಗಳ ಆರೈಕೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ವನತಾರಾದೊಂದಿಗೆ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ. ಇದರಡಿಯಲ್ಲಿ ಆಧುನಿಕ ಆನೆ ಚಿಕಿತ್ಸಾ ಮತ್ತು ಆರೈಕೆ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಆಸ್ಪತ್ರೆ, ಪೋಷಕಾಂಶ ಕೇಂದ್ರ ಮತ್ತು ಜಲಚಿಕಿತ್ಸಾ (ಹೈಡ್ರೋಥೆರಪಿ) ಸೌಲಭ್ಯಗಳು ಸೇರಿವೆ. ವಯಸ್ಸಿನಲ್ಲಿ ಹಿರಿಯ ಆನೆಗಳಿಗಾಗಿ ಪ್ರತ್ಯೇಕ ನಿವೃತ್ತಿ ಮತ್ತು ಆರೈಕೆ ಕೇಂದ್ರವನ್ನೂ ನಿರ್ಮಿಸಲಾಗುವುದು.

ದೇಶದ ನಾಲ್ಕು ರಾಜ್ಯಗಳಲ್ಲಿ ಆನೆ ಕಲ್ಯಾಣ ಕಾರ್ಯಕ್ರಮ: ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಅಂಡಮಾನ್-ನಿಕೋಬಾರ್ ದ್ವೀಪ ಸಮೂಹಗಳಲ್ಲಿ ರಾಜ್ಯ ಅರಣ್ಯ ಇಲಾಖೆಗಳೊಂದಿಗೆ ಕೈಜೋಡಿಸಿ ವನತಾರಾ ಆನೆ ಕಲ್ಯಾಣ ಔಟ್‌ರೀಚ್ ಕಾರ್ಯಕ್ರಮವನ್ನು ಪೂರ್ಣಗೊಳಿಸಿದೆ. ಇದರ ಅಡಿಯಲ್ಲಿ 182 ಆನೆಗಳು ಮತ್ತು 242 ಮಾವುತರನ್ನು ಒಳಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಆನೆಗಳ ಆರೋಗ್ಯ, ಮಾನವೀಯ ರೀತಿಯಲ್ಲಿ ಆರೈಕೆ, ಪ್ರಥಮ ಚಿಕಿತ್ಸೆ ಮತ್ತು ಅತ್ಯುತ್ತಮ ನಿರ್ವಹಣೆಗೆ ಸಂಬಂಧಿಸಿದ ತರಬೇತಿಗಳನ್ನು ನೀಡಲಾಗಿದೆ. ಪಶುವೈದ್ಯಕೀಯ ಹಾಗೂ ಕಲ್ಯಾಣ ಕಿಟ್‌ಗಳೊಂದಿಗೆ ಪೌಷ್ಟಿಕಾಂಶದ ಬೆಂಬಲವನ್ನೂ ಒದಗಿಸಲಾಗಿದೆ.

ಮಕ್ಕಳಲ್ಲಿ ಆನೆಗಳ ಬಗ್ಗೆ ಸಂವೇದನೆಯನ್ನು ಹೆಚ್ಚಿಸಲು ವನತಾರಾ ʻಮೈ ಫ್ರೆಂಡ್ ಲೀಲಾವತಿʼ ಸಾಮಾಜಿಕ ಜಾಲತಾಣ ಅಭಿಯಾನವನ್ನೂ ಆರಂಭಿಸಿದೆ. ಇದರ ಮೂಲಕ ʻಲೀಲಾವತಿʼ ಹೆಸರಿನ ಹೆಣ್ಣಾನೆಯ ಕಥೆಯ ಮೂಲಕ ಮಕ್ಕಳಿಗೆ ದಯೆ, ಕರುಣೆ ಮತ್ತು ಪ್ರಾಣಿಗಳ ಗೌರವದ ಸಂದೇಶವನ್ನು ಸಾರಲಾಗುತ್ತಿದೆ.

ಮಾನವ-ಆನೆ ಸಂಘರ್ಷ, ಜಾಗತಿಕ ಸಹಕಾರ: ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡಲು ವನತಾರಾ ಎಲಿಫೆಂಟ್ ಪ್ರೊಟೆಕ್ಷನ್ ಇನಿಷಿಯೇಟಿವ್ (EPI) ಫೌಂಡೇಷನ್‌ಗೂ ಅನುದಾನ ನೀಡುತ್ತಿದೆ. ಇದರ ಮೂಲಕ ಏಷ್ಯಾ ಮತ್ತು ಆಫ್ರಿಕಾದ ಆನೆಗಳಿರುವ ದೇಶಗಳ ತಜ್ಞರು, ಸಂರಕ್ಷಣೆ ಮಾಡುವವರು ಮತ್ತು ಯುವಕರನ್ನು 2027ರ ಮಾರ್ಚ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆಯುವ ಜಾಗತಿಕ ಸಮ್ಮೇಳನಗಳಲ್ಲಿ ಭಾಗವಹಿಸಲು ಬೆಂಬಲ ನೀಡಲಾಗುತ್ತದೆ. ಇದರೊಂದಿಗೆ ಇಪಿಐ ಯೂಥ್ ಅಂಬಾಸಿಡರ್ಸ್ ಪ್ರೋಗ್ರಾಂ ಅನ್ನು ಮೊದಲ ಬಾರಿಗೆ ಭಾರತಕ್ಕೂ ವಿಸ್ತರಿಸಲು ಸಹಾಯ ಮಾಡಲಾಗುವುದು.

ವಂತಾರಾದ ಪ್ರಕಾರ, ತಳಮಟ್ಟದಲ್ಲಿ ಮಾನವ-ಆನೆ ಸಂಘರ್ಷದ ಘಟನೆಗಳನ್ನು ಎದುರಿಸಲು ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡುವ ಪಶುವೈದ್ಯಕೀಯ ತಂಡಗಳು, ಥರ್ಮಲ್ ಡ್ರೋನ್ ಕಣ್ಗಾವಲು ಮತ್ತು ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗಾಯಗೊಂಡ ಆನೆಗಳಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ನೀಡುವುದರ ಜೊತೆಗೆ ಮಾನವರು ಮತ್ತು ಆನೆಗಳ ನಡುವೆ ದೀರ್ಘಕಾಲದ ಉತ್ತಮ ಸಹ-ಅಸ್ತಿತ್ವವನ್ನು ಉತ್ತೇಜಿಸುವುದು ಈ ಪ್ರಯತ್ನಗಳ ಮುಖ್ಯ ಉದ್ದೇಶವಾಗಿದೆ.