SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಅಪ್ರಾಪ್ತನಿಗೆ ಬೈಕ್ ನೀಡಿದ ಮಾಲೀಕನಿಗೆ 25 ಸಾವಿರ ರೂ. ದಂಡ

ಅಪ್ರಾಪ್ತನಿಗೆ ಬೈಕ್ ನೀಡಿದ ಮಾಲೀಕನಿಗೆ 25 ಸಾವಿರ ರೂ. ದಂಡ

0
136

ದಾವಣಗೆರೆ: ನಗರದಲ್ಲಿ ಅಪ್ರಾಪ್ತ ವಯಸ್ಸಿನವರ ವಾಹನ ಚಾಲನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಕೈಗೊಂಡಿರುವ ಕಾರ್ಯಾಚರಣೆಯಡಿ, ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆ ಮಾಡಲು ನೀಡಿದ ವಾಹನ ಮಾಲೀಕರಿಗೆ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.

ಎಸ್ಪಿ ಡಾ. ಎಚ್.ಟಿ. ಶೇಖರ್ ಸೂಚನೆ ಮೇರೆಗೆ, ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ, ನಗರ ಡಿವೈಎಸ್ಪಿ ಶರಣ ಬಸವೇಶ್ವರ ಬಿ. ಹಾಗೂ ಸಂಚಾರ ವೃತ್ತದ ಸಿಪಿಐ ಮಂಜುನಾಥ ಮಾರ್ಗದರ್ಶನದಲ್ಲಿ ಉತ್ತರ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಮಹಾದೇವ ಭತ್ತೆ ನೇತೃತ್ವದ ತಂಡ ಬಿನ್ನಿ ಕಂಪನಿ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸಿತ್ತು.

ಈ ವೇಳೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಬಾಲಕ ಅಪ್ರಾಪ್ತ ವಯಸ್ಸಿನವನಾಗಿರುವುದು ಪತ್ತೆಯಾಯಿತು. ಬಳಿಕ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಅಪ್ರಾಪ್ತ ಬಾಲಕನಿಗೆ ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಾಲನೆ ಮಾಡಲು ಅವಕಾಶ ನೀಡಿದ ಆರೋಪದಡಿ ವಾಹನ ಮಾಲೀಕರ ವಿರುದ್ಧ ದೋಷಾರೋಪಣಾ ಪತ್ರವನ್ನು ದಾವಣಗೆರೆಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಜುಲೈ 29 ರಂದು ವಾಹನ ಮಾಲೀಕರಿಗೆ 25,000 ದಂಡ ವಿಧಿಸಿ ಆದೇಶಿಸಿದೆ.