ಹರಿಹರ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಮಠಕ್ಕೆ ಭಕ್ತರು ದಾನವಾಗಿ ನೀಡಿದ್ದ ಸುಮಾರು 1.5 ಕೆ.ಜಿ. ಚಿನ್ನಾಭರಣಗಳ ಲೆಕ್ಕವನ್ನು ಮಠದ ಆಡಳಿತ ಮಂಡಳಿ ನೀಡಿಲ್ಲ ಎಂದು ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಗಂಭೀರ ಆರೋಪ ಮಾಡಿದ್ದಾರೆ.
ತಾಲೂಕಿನ ಹನಗವಾಡಿ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠಕ್ಕೆ ಸೇರಿದ ಸುಮಾರು ಒಂದೂವರೆ ಕೆ.ಜಿ. ಚಿನ್ನಾಭರಣಗಳ ಕುರಿತು ಯಾವುದೇ ಸ್ಪಷ್ಟ ಲೆಕ್ಕ ನೀಡಿಲ್ಲ. ₹ 27 ಕೋಟಿ ನಗದು ಮೊತ್ತದ ಲೆಕ್ಕವನ್ನು ಮಾತ್ರ ಸಮಾಜದ ಮುಂದೆ ಇಡಲಾಗಿದೆ ಎಂದು ದೂರಿದರು.
2008ರ ಫೆಬ್ರವರಿ 18ರಂದು ಹರಿಹರ ಪಂಚಮಸಾಲಿ ಮಠ ಸ್ಥಾಪನೆಯಾಗಿತ್ತು. ಆ ಸಂದರ್ಭದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಶ್ರೀಗಳಿಗೆ ಚಿನ್ನದ ಉಂಗುರ, ಕಡಗ ಹಾಗೂ ಭವ್ಯ ಚಿನ್ನದ ಕಿರೀಟ ಸೇರಿದಂತೆ ಸುಮಾರು 1.5 ಕೆ.ಜಿ. ಚಿನ್ನಾಭರಣಗಳನ್ನು ದಾನವಾಗಿ ನೀಡಿದ್ದರು ಎಂದು ಅವರು ತಿಳಿಸಿದರು.
ಇತ್ತೀಚೆಗೆ ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ಭಾಗಗಳಿಗೆ ಭೇಟಿ ನೀಡಿದ ವೇಳೆ, ಆಭರಣಗಳನ್ನು ದಾನವಾಗಿ ನೀಡಿದ್ದ ಭಕ್ತರು ಈ ವಿಷಯವನ್ನು ತಮ್ಮ ಗಮನಕ್ಕೆ ತಂದಿದ್ದಾರೆ. ಸ್ವಾಮೀಜಿಗಳಿಗೆ ನೀಡಲಾಗಿದ್ದ ಆಭರಣಗಳು ಸದ್ಯ ಮಠದ ಟ್ರಸ್ಟ್ ಸದಸ್ಯರ ವಶದಲ್ಲಿವೆ ಎಂದು ತಿಳಿದುಬಂದಿದ್ದರೂ, ಅವುಗಳ ಕುರಿತು ಯಾವುದೇ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿದರು.
ಮಠದ ಆಸ್ತಿಪಾಸ್ತಿ ಮತ್ತು ದೇಣಿಗೆಗಳ ಕುರಿತು ಸಂಪೂರ್ಣ ಹಾಗೂ ಪಾರದರ್ಶಕ ಲೆಕ್ಕವನ್ನು ಸಮಾಜದ ಮುಂದೆ ಮಂಡಿಸಬೇಕು ಎಂದು ಸೋಮಣ್ಣ ಬೇವಿನಮರದ ಒತ್ತಾಯಿಸಿದರು. ಈ ಆರೋಪಗಳಿಗೆ ಮಠದ ಆಡಳಿತ ಮಂಡಳಿಯಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ತಿಳಿಸಿದರು.





















