SK Home Ad
Home ಕ್ರೀಡೆ ಅಫ್ಘಾನ್ ಸರಣಿಯಿಂದ ‘ಕಿಂಗ್’ ಕೊಹ್ಲಿ ಔಟ್; ಮಂಡಿರಜ್ಜು ಗಾಯದಿಂದ ಹೊರಕ್ಕೆ, ಯಾರಿಗೆ ವಿರಾಟ್ ಸ್ಥಾನ?

ಅಫ್ಘಾನ್ ಸರಣಿಯಿಂದ ‘ಕಿಂಗ್’ ಕೊಹ್ಲಿ ಔಟ್; ಮಂಡಿರಜ್ಜು ಗಾಯದಿಂದ ಹೊರಕ್ಕೆ, ಯಾರಿಗೆ ವಿರಾಟ್ ಸ್ಥಾನ?

0
24

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾಕ್ಕೆ ಭಾರಿ ಹಿನ್ನಡೆಯಾಗಿದೆ. ಮಂಡಿರಜ್ಜು (Hamstring) ಗಾಯದ ಸಮಸ್ಯೆಯಿಂದಾಗಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈ ಸರಣಿಯಿಂದ ಹೊರಗುಳಿದಿದ್ದಾರೆ. ಕೊಹ್ಲಿ ಅವರ ಅಲಭ್ಯತೆಯಿಂದ ತೆರವಾದ ಸ್ಥಾನಕ್ಕೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.

ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಚಾಂಪಿಯನ್ ಆಗುವಲ್ಲಿ ವಿರಾಟ್ ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧದ ಆ ಪಂದ್ಯದಲ್ಲಿ ಅಜೇಯ 75 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದ ಕೊಹ್ಲಿ, ಬ್ಯಾಟಿಂಗ್ ಮಾಡುವಾಗಲೇ ತೀವ್ರ ಸ್ನಾಯು ಸೆಳೆತ ಮತ್ತು ಮಂಡಿರಜ್ಜು ನೋವಿನಿಂದ ಬಳಲುತ್ತಿದ್ದರು. ಅಂದಿನ ನೋವಿನ ನಡುವೆಯೂ ತಂಡಕ್ಕೆ ಕಪ್ ತಂದುಕೊಟ್ಟಿದ್ದ ಕೊಹ್ಲಿ, ಈಗ ಗಾಯದಿಂದ ಚೇತರಿಸಿಕೊಳ್ಳಲು ವಿಶ್ರಾಂತಿಯ ಮೊರೆ ಹೋಗಿದ್ದಾರೆ.

ಕೊಹ್ಲಿ ಅವರ ಚೇತರಿಕೆಗೆ ಹೆಚ್ಚಿನ ಸಮಯಾವಕಾಶ ನೀಡುವ ಉದ್ದೇಶದಿಂದ ಆಯ್ಕೆ ಸಮಿತಿಯು ಈ ನಿರ್ಧಾರ ಕೈಗೊಂಡಿದೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದು, “ವಿರಾಟ್ ಈಗಷ್ಟೇ ಗಾಯಕ್ಕೆ ತುತ್ತಾಗಿದ್ದಾರೆ. ಅವರು ಸಂಪೂರ್ಣವಾಗಿ ಫಿಟ್ ಆಗಲು ಸ್ವಲ್ಪ ಸಮಯ ಬೇಕಾಗಬಹುದು. ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆಗೆ ಅವರು ಮರಳಿ ತಂಡ ಸೇರುವ ಭರವಸೆ ಇದೆ,” ಎಂದು ತಿಳಿಸಿದ್ದಾರೆ.

ಇತ್ತ ವಿರಾಟ್ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್‌ಗೆ ಮತ್ತೊಮ್ಮೆ ಏಕದಿನ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸುವರ್ಣಾವಕಾಶ ಸಿಕ್ಕಿದೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿಯು ಜೂನ್ 13ರಿಂದ ಆರಂಭವಾಗಲಿದ್ದು, ಕೊಹ್ಲಿ ಅಲಭ್ಯತೆ ಅಭಿಮಾನಿಗಳಲ್ಲಿ ಅಲ್ಪ ನಿರಾಸೆ ಮೂಡಿಸಿದೆ. ಇತ್ತೀಚಿನ ಫಾರ್ಮ್ ಗಮನಿಸಿದರೆ ಜೈಸ್ವಾಲ್ ಕೂಡ ತಂಡಕ್ಕೆ ಬಲ ತುಂಬುವ ನಿರೀಕ್ಷೆಯಿದೆ.