ದಾವಣಗೆರೆ: ತಾಯಿಯ ಸಾವು ಕೊಲೆ ಎಂದು ಶಂಕಿಸಿ ಮರು ಮರಣೋತ್ತರ ಪರೀಕ್ಷೆಗಾಗಿ ಇಬ್ಬರು ಪುತ್ರರು ರಾತ್ರೋರಾತ್ರಿ ಸಮಾಧಿ ಅಗೆದು ಕೊಳೆತ ಶವವನ್ನು ಬೈಕ್‌ನಲ್ಲಿ ಆಸ್ಪತ್ರೆಗೆ ತಂದ ಈ ಭೀಕರ ಹೋರಾಟ ಈಗ ಅವರ ಪಾಲಿಗೆ ಮುಳುವಾಗಿದ್ದು, ಕಾನೂನು ಉಲ್ಲಂಘನೆಯ ಹಿನ್ನೆಲೆಯಲ್ಲಿ ಅವರ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ.
ತಾಯಿಯ ಸಾವಿನ ರಹಸ್ಯ ಬಯಲು ಮಾಡಲು ಹೊರಟ ಮಕ್ಕಳು ಈಗ ಕಾನೂನಿನ ಇಕ್ಕಟ್ಟಿಗೆ ಸಿಲುಕಿದ್ದಾರೆ. ನಿಯಮಗಳ ಪ್ರಕಾರ ಹೂತ ಶವವನ್ನು ನ್ಯಾಯಾಲಯ ಅಥವಾ ತಹಶೀಲ್ದಾರ್ ಅನುಮತಿ ಇಲ್ಲದೆ ಹೊರ ತೆಗೆಯುವಂತಿಲ್ಲ. ಕಾನೂನು ಉಲ್ಲಂಘಿಸಿ ಶವ ತೆಗೆದ ಹಿನ್ನೆಲೆಯಲ್ಲಿ ಮಲೇಬೆನ್ನೂರು ಪೊಲೀಸರು ಇಬ್ಬರು ಪುತ್ರರನ್ನು ವಶಕ್ಕೆ ಪಡೆದು, ಅವರ ವಿರುದ್ಧವೇ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಶವದ ಖಚಿತತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಘಟನೆ ಹಿನ್ನೆಲೆ: ಹರಿಹರ ತಾಲೂಕಿನ ಆದಾಪುರ ಗ್ರಾಮದ ಈರಮ್ಮ (58) ಎಂಬ ಮಹಿಳೆ ಕಳೆದ ಏಪ್ರಿಲ್ 29ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ತಾಯಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮಕ್ಕಳಾದ ಮಂಜುನಾಥ್ ಹಾಗೂ ವೆಂಕಟೇಶ್, 11 ಜನರ ವಿರುದ್ಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಮಲೆಬೆನ್ನೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.
ಆದರೆ, ಪೊಲೀಸ್ ತನಿಖೆಯಿಂದ ತೃಪ್ತರಾಗದ ಅಣ್ಣ-ತಮ್ಮಂದಿರು ಕಳೆದ ಶನಿವಾರ ರಾತ್ರಿ ಸಮಾಧಿ ಅಗೆದು ತಾಯಿಯ ಮೃತದೇಹವನ್ನು ಹೊರ ತೆಗೆದಿದ್ದರು. ನಂತರ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಬೈಕ್‌ನಲ್ಲಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಮರು ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯುತ್ತಿದ್ದ ವೇಳೆ ದಾವಣಗೆರೆ ಹೊರ ವಲಯದಲ್ಲಿ ಅಪಘಾತ ಸಂಭವಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು.






















