ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಎಚ್. ಕಡದಕಟ್ಟೆ ಗ್ರಾಮದ ಸಮೀಪದ ತುಂಗಾ ನಾಲೆಗೆ ಹಾರಿ ಸರ್ವೇ ಇಲಾಖೆಯ ಗುತ್ತಿಗೆ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತರನ್ನು ನ್ಯಾಮತಿ ತಾಲ್ಲೂಕಿನ ಸರ್ವೇ ಇಲಾಖೆಯಲ್ಲಿ ಗುತ್ತಿಗೆ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಮಣಿಕಂಠ (28) ಎಂದು ಗುರುತಿಸಲಾಗಿದೆ. ಅವರು ಮೂರು ತಿಂಗಳ ಹಿಂದೆ ರಾಣಿಬೆನ್ನೂರು ಮೂಲದ ಯುವತಿಯೊಂದಿಗೆ ವಿವಾಹವಾಗಿದ್ದರು.
ಇದನ್ನೂ ಓದಿ: ಅಯೋಧ್ಯೆ ದೇಣಿಗೆ ಪ್ರಕರಣ: ಧಾರ್ಮಿಕ ನಂಬಿಕೆ ಕದಡುವುದು ಬೇಡ
ತುಂಗಾ ನಾಲೆಗೆ ಹಾರಿದ ಶಂಕೆ : ಮಣಿಕಂಠ ಅವರು ಎಚ್. ಕಡದಕಟ್ಟೆ ಗ್ರಾಮದ ಸಮೀಪದ ತುಂಗಾ ನಾಲೆ ಬಳಿ ತಮ್ಮ ಬೈಕ್ ಹಾಗೂ ಬ್ಯಾಗ್ ಬಿಟ್ಟು ನೀರಿಗೆ ಹಾರಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳೀಯರು ಬೈಕ್ ಮತ್ತು ಇತರ ವಸ್ತುಗಳನ್ನು ಗಮನಿಸಿ ತಕ್ಷಣವೇ ಅಗ್ನಿಶಾಮಕ ದಳ ಹಾಗೂ ನ್ಯಾಮತಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಆರಂಭವಾದ ಶೋಧ ಕಾರ್ಯಾಚರಣೆಯಲ್ಲಿ, ಶುಕ್ರವಾರ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಸಗಟೂರು ಗ್ರಾಮದ ಸಮೀಪ ಮಣಿಕಂಠ ಅವರ ಮೃತದೇಹ ಪತ್ತೆಯಾಯಿತು.
ಡೆತ್‌ನೋಟ್ ಪತ್ತೆ : ಘಟನಾ ಸ್ಥಳದಲ್ಲಿ ಡೆತ್‌ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ ವೈಯಕ್ತಿಕ ಕಾರಣಗಳಿಂದ ತಾವು ತೀವ್ರವಾಗಿ ಮಾನಸಿಕವಾಗಿ ನೊಂದಿರುವುದಾಗಿ ಉಲ್ಲೇಖಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಅದರಲ್ಲದೆ ಅದರಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ನಡೆಗಳಿಂದ ತಾನು ತೀವ್ರವಾಗಿ ನೊಂದಿದ್ದಾಗಿ ಉಲ್ಲೇಖಿಸಿದ್ದಾರೆ. “ನನ್ನ ಸಾವಿಗೆ ನಾನೇ ಕಾರಣ, ಬೇರೆ ಯಾರೂ ಅಲ್ಲ” ಎಂಬ ಉಲ್ಲೇಖವೂ ಡೆತ್‌ನೋಟ್‌ನಲ್ಲಿ ಇರುವುದಾಗಿ ತಿಳಿದುಬಂದಿದೆ. ಡೆತ್‌ನೋಟ್‌ನಲ್ಲಿರುವ ವಿಷಯವನ್ನು ಪೊಲೀಸರು ತನಿಖೆಯ ಭಾಗವಾಗಿ ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: 20 ದಿನಗಳ ಉಪವಾಸ: ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು
ಕುಟುಂಬದಿಂದ ದೂರು : ಇನ್ನೊಂದೆಡೆ, ಮಣಿಕಂಠ ಅವರ ಕುಟುಂಬಸ್ಥರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಹಾಗೂ ಮತ್ತೋರ್ವ ವ್ಯಕ್ತಿಯ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕುಟುಂಬದ ದೂರಿನ ಆಧಾರದಲ್ಲಿ ಹಾಗೂ ಲಭ್ಯವಿರುವ ದಾಖಲೆಗಳು, ಡೆತ್‌ನೋಟ್ ಸೇರಿದಂತೆ ಎಲ್ಲ ಸಾಕ್ಷ್ಯಗಳನ್ನು ಪರಿಶೀಲಿಸಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ತನಿಖೆ ಮುಂದುವರಿಕೆ : ಪ್ರಕರಣದ ನಿಖರ ಕಾರಣ ಏನು, ಆತ್ಮಹತ್ಯೆಗೆ ಕಾರಣವಾದ ಸಂದರ್ಭಗಳು ಯಾವುವು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಅಂತಿಮ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





















