SK Home Ad
Home ನಮ್ಮ ಜಿಲ್ಲೆ ದಾವಣಗೆರೆ ನ್ಯಾಯಕ್ಕಾಗಿ ತಾಯಿಯ ಸಮಾಧಿ ಅಗೆದ ಮಕ್ಕಳು; ಮರು ಮರಣೋತ್ತರ ಪರೀಕ್ಷೆಗೆ ಬೈಕ್‌ನಲ್ಲಿ ಶವ ಸಾಗಾಟದ ವೇಳೆ...

ನ್ಯಾಯಕ್ಕಾಗಿ ತಾಯಿಯ ಸಮಾಧಿ ಅಗೆದ ಮಕ್ಕಳು; ಮರು ಮರಣೋತ್ತರ ಪರೀಕ್ಷೆಗೆ ಬೈಕ್‌ನಲ್ಲಿ ಶವ ಸಾಗಾಟದ ವೇಳೆ ಅಪಘಾತ‌

0
134

ದಾವಣಗೆರೆ: ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ ತಾಯಿಯ ಮೃತದೇಹವನ್ನು ಮರು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಮಕ್ಕಳು ಸಮಾಧಿಯಿಂದ ಹೊರತೆಗೆದು ಬೈಕ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಹರಿಹರ ತಾಲೂಕಿನ ಆದಾಪುರ ಗ್ರಾಮದ ಈರಮ್ಮ ಎಂಬ ಮಹಿಳೆ ಕಳೆದ ಏಪ್ರಿಲ್ 29ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ತಾಯಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಮಕ್ಕಳಾದ ಮಂಜುನಾಥ್ ಹಾಗೂ ವೆಂಕಟೇಶ್, 11 ಜನರ ವಿರುದ್ಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಮಲೆಬೆನ್ನೂರು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

ಆದರೆ, ಪೊಲೀಸ್ ತನಿಖೆಯಿಂದ ತೃಪ್ತರಾಗದ ಅಣ್ಣ-ತಮ್ಮಂದಿರು ಕಳೆದ ರಾತ್ರಿ ಸಮಾಧಿಯನ್ನು ಅಗೆದು ತಾಯಿಯ ಮೃತದೇಹವನ್ನು ಹೊರ ತೆಗೆದಿದ್ದಾರೆ ಎನ್ನಲಾಗಿದೆ. ನಂತರ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಬೈಕ್‌ನಲ್ಲಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಮರು ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯುತ್ತಿದ್ದ ವೇಳೆ ದಾವಣಗೆರೆ ಹೊರ ವಲಯದಲ್ಲಿ ಅಪಘಾತ ಸಂಭವಿಸಿದೆ.

ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ವಶಕ್ಕೆ ಪಡೆದು ದಾವಣಗೆರೆ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಸ್ತುತ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ತಾಯಿಯ ಸಾವಿನ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆದಿಲ್ಲ ಹಾಗೂ ಕೊಲೆ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿರುವ ಮಂಜುನಾಥ್ ಮತ್ತು ವೆಂಕಟೇಶ್, ಮರು ಮರಣೋತ್ತರ ಪರೀಕ್ಷೆ ನಡೆಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಸಂಬಂಧ ಪೊಲೀಸ್ ಇಲಾಖೆ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದು, ಮರು ಮರಣೋತ್ತರ ಪರೀಕ್ಷೆ ಕುರಿತು ಅಧಿಕಾರಿಗಳು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.