ದಾವಣಗೆರೆ: ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ರೈತರು ದೇವರ ಮೊರೆ ಹೋಗಿ ಮಳೆಯಿಗಾಗಿ ಪ್ರಾರ್ಥಿಸುವುದು ಸಾಮಾನ್ಯ. ಆದರೆ ದಾವಣಗೆರೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಮಳೆಯ ಆಗಮನಕ್ಕಾಗಿ ವಿಶೇಷ ಪೂಜೆ ನೆರವೇರಿಸಿ ದೇವರ ಮೊರೆ ಹೋಗಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ಪ್ರಾರ್ಥಿಸಿ, ಜಿಲ್ಲೆ ಹಾಗೂ ತಾಲೂಕು ಕೃಷಿ ಪರಿಕರ ಮಾರಾಟಗಾರರ ಸಂಘ ಮತ್ತು ಕೃಷಿ ಇಲಾಖೆ ಸಂಯುಕ್ತವಾಗಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ನಗರದ ಶ್ರೀದುರ್ಗಾಂಬಿಕಾ ದೇವಸ್ಥಾನದ ಸಮೀಪ ಕರಿಗಲ್ಲು ಪೂಜೆಯನ್ನು ಅತ್ಯಂತ ಭಕ್ತಿಭಾವದಿಂದ ನೆರವೇರಿಸಿತು.
ರೈತರ ಶ್ರೇಯೋಭಿವೃದ್ಧಿ, ಕೃಷಿ ಚಟುವಟಿಕೆಗಳ ಯಶಸ್ಸು ಹಾಗೂ ವರುಣನ ಕೃಪೆ ದೊರೆಯಲೆಂದು ವಿಶೇಷ ಪೂಜೆ ಆಯೋಜಿಸಲಾಗಿತ್ತು. ನಗರದೇವತೆ ಶ್ರೀದುರ್ಗಾಂಬಿಕಾ ದೇವಿಯ ಸನ್ನಿಧಾನದಲ್ಲಿ ಭಜನಾ ಮಂಡಳಿಯ ಭಕ್ತಿಗೀತೆಗಳೊಂದಿಗೆ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಪೂರ್ಣಕುಂಭ ಮೆರವಣಿಗೆಯೊಂದಿಗೆ ಕರಿಗಲ್ಲು ಪೂಜೆ ನೆರವೇರಿಸಲಾಯಿತು.
ಉತ್ತಮ ಮಳೆಯಾಗಿ ರೈತರಿಗೆ ಅನುಕೂಲವಾಗಲಿ ಹಾಗೂ ಕೃಷಿ ಚಟುವಟಿಕೆಗಳು ಸುಗಮವಾಗಿ ನಡೆಯಲಿ ಎಂಬ ಆಶಯದೊಂದಿಗೆ ದೇವರ ಮೊರೆ ಹೋಗಿರುವುದು ಗಮನಾರ್ಹವಾಗಿದೆ. ಈ ಸಂದರ್ಭದಲ್ಲಿ ಉತ್ತಮ ಮಳೆಯೊಂದಿಗೆ ಸಮೃದ್ಧ ಕೃಷಿ ಉತ್ಪಾದನೆ ಆಗಲಿ ಹಾಗೂ ಜಿಲ್ಲೆಯ ರೈತ ಸಮುದಾಯ ಸುಖಸಮೃದ್ಧಿಯಿಂದ ಇರಲಿ ಎಂದು ಎಲ್ಲರೂ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆ. ಜಿಯಾವುಲ್ಲಾ, ದಾವಣಗೆರೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ, ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಅಗಸನಕಟ್ಟೆ ಶಿವಮೂರ್ತಪ್ಪ, ತಾಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಆರನೇ ಮೈಲಿಗಲ್ಲು ಮಂಜಣ್ಣ, ಖಜಾಂಚಿ ಬಾಳೆಹೊಲದ ಕಿರಣ್, ಕಾರ್ಯದರ್ಶಿ ಸೋಮಶೇಖರ್ ಸೇರಿದಂತೆ ಸಂಘದ ನಿರ್ದೇಶಕರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.





















