ಕೇವಲ 370 ರೂಪಾಯಿಯ ಚಿಕನ್ ಬಿರಿಯಾನಿ ಒಬ್ಬ ಯುವಕನ ಇಡೀ ಕೆರಿಯರ್ ಅನ್ನೇ ಹಾಳು ಮಾಡಬಹುದು ಅಂತ ಯಾರಾದ್ರೂ ಯೋಚಿಸಿದ್ರಾ ಖಂಡಿತ ಇಲ್ಲ. ಆದರೆ ಗುರುಗ್ರಾಮದಲ್ಲಿ ನಡೆದ ಈ ಒಂದು ಘಟನೆ ಈಗ ಇಡೀ ದೇಶಾದ್ಯಂತ ಭಾರಿ ಚರ್ಚೆಗೆ ಮತ್ತು ವಿವಾದಕ್ಕೆ ಕಾರಣವಾಗಿದೆ. ಕಾಮಿಡಿ ಮಾಡೋ ಭರದಲ್ಲಿ ಲಿಮಿಟ್ ದಾಟಿದರೆ ಏನಾಗುತ್ತದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.
ವಿಷಯ ಏನಪ್ಪಾ ಅಂದ್ರೆ, ಗುರುಗ್ರಾಮದ ಹಿಮಾಂಶು ಜಂಗ್ರಾ ಅನ್ನೋ ಯುವಕ ಇತ್ತೀಚೆಗೆ ಸ್ಟ್ಯಾಂಡ್‌ಅಪ್ ಕಾಮಿಡಿ ಶೋ ಒಂದರಲ್ಲಿ ತನ್ನ ಡೇಟಿಂಗ್ ಅನುಭವವನ್ನು ಹಂಚಿಕೊಂಡಿದ್ದ. ಶೋನಲ್ಲಿ ಆತ, ತಾನು ಒಬ್ಬ ಹುಡುಗಿಯನ್ನ ಡೇಟ್‌ಗೆ ಕರೆದುಕೊಂಡು ಹೋಗಿ 370 ರೂಪಾಯಿ ಕೊಟ್ಟು ಚಿಕನ್ ಬಿರಿಯಾನಿ ಕೊಡಿಸಿದ್ದಾಗಿ ಹೇಳುತ್ತಾನೆ. ಆಮೇಲೆ ಆಕೆ ತನ್ನನ್ನು ಮನೆಗೆ ಡ್ರಾಪ್ ಮಾಡಲು ಕೇಳಿಕೊಂಡಾಗ ತನಗೆ ಆಶ್ಚರ್ಯ ಆಯ್ತು ಅಂತ ವಿವರಣೆ ನೀಡುತ್ತಾನೆ.
ಆದರೆ ವಿವಾದ ಶುರುವಾಗಿದ್ದೇ ಇಲ್ಲಿಂದ. ಆತ ಮುಂದುವರಿದು, “ನಾನು ಆಕೆಗಾಗಿ 370 ರೂಪಾಯಿ ಖರ್ಚು ಮಾಡಿದ್ದೀನಿ, ಅದನ್ನು ಹೇಗಾದ್ರೂ ವಸೂಲಿ ಮಾಡಲೇಬೇಕು” ಅನ್ನೋ ಅರ್ಥದಲ್ಲಿ ಮಾತನಾಡುತ್ತಾನೆ. ಅಂದರೆ, ಕೇವಲ ಬಿರಿಯಾನಿ ಕೊಡಿಸಿದ್ದಕ್ಕೆ ಪ್ರತಿಯಾಗಿ ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದುವ ನಿರೀಕ್ಷೆ ಇತ್ತು ಎಂಬ ರೀತಿಯಲ್ಲಿ ಸಾರ್ವಜನಿಕವಾಗಿ ಕೀಳು ಮಟ್ಟದ ದ್ವಂದ್ವಾರ್ಥದ ಹೇಳಿಕೆ ನೀಡುತ್ತಾನೆ.
ಯಾವಾಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತೋ, ನೆಟ್ಟಿಗರ ಆಕ್ರೋಶ ನೆತ್ತಿಗೇರಿತು. ಮಹಿಳೆಯರನ್ನು ಕೇವಲ ಹಣ ಮತ್ತು ದೈಹಿಕ ಸುಖಕ್ಕೆ ಹೋಲಿಸುವ ಈತನ ವಿಕೃತ ಮನೋಭಾವಕ್ಕೆ ಇಂಟರ್ನೆಟ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ವಿಶೇಷ ಅಂದ್ರೆ, ಕೇವಲ ಮಹಿಳೆಯರಷ್ಟೇ ಅಲ್ಲದೆ, ಪ್ರಜ್ಞಾವಂತ ಪುರುಷರೂ ಸಹ ಈತನ ಮಾತನ್ನು ತೀವ್ರವಾಗಿ ಖಂಡಿಸಿದರು. ಇಡೀ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳು ಮತ್ತು ಟೀಕೆಗಳು ಹೆಚ್ಚಾಗುತ್ತಿದ್ದಂತೆ ಪರಿಸ್ಥಿತಿ ಕೈಮೀರುವುದನ್ನು ಅರಿತ ಹಿಮಾಂಶು, ಕೊನೆಗೆ ಸಾರ್ವಜನಿಕವಾಗಿ ಕ್ಷಮೆ ಕೇಳಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿಕೊಂಡಿದ್ದ.
ಆದರೆ ವಿವಾದ ಅಲ್ಲಿಗೇ ನಿಲ್ಲಲಿಲ್ಲ. ಈ ವಿವಾದದ ಬಿಸಿ ಆತ ಕೆಲಸ ಮಾಡುತ್ತಿದ್ದ ಗುರುಗ್ರಾಮದ ‘ಸಾತ್ವಿಕ್ ಡಿಸೈನ್’ ಸಂಸ್ಥೆಗೂ ತಟ್ಟಿತು. ಮಹಿಳೆಯರ ಬಗ್ಗೆ ಇಂತಹ ಕೀಳು ಮತ್ತು ಅಸಮಂಜಸ ಮನೋಭಾವ ಹೊಂದಿರುವ ವ್ಯಕ್ತಿ ತಮ್ಮ ಸಂಸ್ಥೆಯಲ್ಲಿ ಇರಬಾರದು ಎಂದು ನಿರ್ಧರಿಸಿದ ಕಂಪನಿಯ ಸಂಸ್ಥಾಪಕ ವಿವೇಕ್ ವಿಶ್ವಕರ್ಮಾ, ಹಿಮಾಂಶುನನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಿದ್ದಾರೆ. ಜೊತೆಗೆ ಈ ಕಠಿಣ ನಿರ್ಧಾರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.
ಸದ್ಯ ಈ ಘಟನೆ ಇಂಟರ್ನೆಟ್‌ನಲ್ಲಿ ಎರಡು ಭಿನ್ನ ಅಭಿಪ್ರಾಯಗಳಿಗೆ ದಾರಿ ಮಾಡಿಕೊಟ್ಟಿದೆ. ಒಂದು ವರ್ಗದ ಜನರು ಕಂಪನಿಯ ಈ ತಕ್ಷಣದ ಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಮಹಿಳೆಯರನ್ನು ಗೌರವಿಸದವರಿಗೆ ಇಂತಹ ಶಿಕ್ಷೆ ಆಗಲೇಬೇಕು, ಆಗಲೇ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಹೋಗುತ್ತದೆ ಎನ್ನುತ್ತಿದ್ದಾರೆ. ಆದರೆ ಮತ್ತೊಂದು ವರ್ಗದ ಜನರು, ಆತ ಮಾಡಿದ್ದು ಖಂಡಿತ ತಪ್ಪು, ಆದರೆ ಸಾರ್ವಜನಿಕವಾಗಿ ಕ್ಷಮೆ ಕೇಳಿದ ಮೇಲೆಯೂ ಕೆಲಸದಿಂದ ತೆಗೆದುಹಾಕುವುದು ಆತನ ಬದುಕನ್ನು ಬೀದಿಗೆ ತಂದಂತೆ ಆಗುತ್ತದೆ, ತಪ್ಪು ಮಾಡಿದವರಿಗೆ ತಿದ್ದಿಕೊಳ್ಳಲು ಒಂದು ಅವಕಾಶ ನೀಡಬೇಕಿತ್ತು ಎಂದು ವಾದಿಸುತ್ತಿದ್ದಾರೆ. ಒಟ್ಟಿನಲ್ಲಿ ಕಾಮಿಡಿ ಹೆಸರಿನಲ್ಲಿ ಸಭ್ಯತೆಯ ಗೆರೆ ದಾಟಿದ ಯುವಕನೊಬ್ಬ ಈಗ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆ.




















